ದೀಪ – ಅಂಬಿಕಾತನಯ ದತ್ತ

Posted on February 6th, 2012 in ಬೇಂದ್ರೆ by sritri

ಬಂತಿದೊ ಶೃಂಗಾರಮಾಸ
ಕಂತು ನಕ್ಕ ಚಂದ್ರಹಾಸ
ಎಂತು ತುಂಬಿತಾsಕಾಶ
ಕಂಡವರನು ಹರಸಲು.

ಕಿರಿಬೆರಳಲಿ ಬೆಳ್ಳಿಹರಳು
ಕರಿಕುರುಳೊಳು ಚಿಕ್ಕೆ ಅರಳು
ತೆರಳಿದಳಿದೊ ತರಳೆ ಇರಳು
ತನ್ನರಸನನರಸಲು.

ಗಂಗೆ ಯಮುನೆ ಕೂಡಿ ಹರಿದು
ಸಂಗಮ ಜಲ ಬಿಳಿದು ಕರಿದು
ತಿಂಗಳ ನಗೆ ಮೇರೆವರಿದು
ಬೇರೆ ಮಿರುಗು ನೀರಿಗು

ಪಂಥದಿಂದ ಮನೆಯ ತೊರೆದು
ಪಾಂಥ ನೆನೆದನತ್ತು ಕರೆದು;
ಇಂಥ ಸಮಯ ಬೇರೆ ಬರದು
ದಂಪತಿಗಳಿಗಾರಿಗು!

ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ಸಾನುರಾಗದಿಂದ ಇಂದು
ದೀಪ ತೇಲಿಬಿಟ್ಟೆವೇ¬—-
ದೀಪ ತೇಲಿ ಬಿಟ್ಟೆವು.

ಈ ಕವಿತೆಯ ಬಗೆಗಿನ ಸುಂದರವಾದ ವಿವರಣೆ “ಸಲ್ಲಾಪ”ದಲ್ಲಿದೆ :-

ಹೇಳೆ ಡೈರಿ , ಮುಂದೇನೆ?

Posted on February 3rd, 2012 in ಭಾವ ಭಾಗೀರಥಿ by sritri

ಅಂಗಡಿಯಿಂದ ಕೊಂಡುತಂದಿದ್ದ ದಿನಸಿಯನ್ನು ಕಾರಿನಿಂದ ಒಳತಂದಿಟ್ಟು, ಕುಡಿಯಲೆಂದು ಲೋಟಕ್ಕೆ ನೀರು ತುಂಬಿಸುತ್ತಿದ್ದಾಗಲೇ ಬಾಗಿಲ ಕರೆಘಂಟೆಯ ಸದ್ದು. ಫೋನ್ ಮಾಡಿ ಮುಂಚಿತವಾಗಿ ತಿಳಿಸದೆ, ನಾವಾಗಿ ಕರೆಯದೆ, ಯಾರ ಮನೆಗೆ ಯಾರೂ ಬಾರದ ಈ ದೇಶದಲ್ಲಿ, ಇದ್ದಕ್ಕಿದ್ದಂತೆ ಬಡಿದುಕೊಳ್ಳುವ ಕರೆಘಂಟೆಯ ಸದ್ದು ನನ್ನನ್ನು ಬೆಚ್ಚಿಸುತ್ತದೆ. ಫೆಡೆಕ್ಸ್‌ನವನು ಯಾವುದೋ ಪ್ಯಾಕೇಜು ತಂದಿದ್ದು, ಸಹಿಗಾಗಿ ಕಾದಿರಬಹುದೆಂದೆಣಿಸಿ ಬಾಗಿಲಿನ ಮಾಯಾಕಿಂಡಿಯಲ್ಲಿ ಇಣುಕಿದೆ. ಸಮವಸ್ತ್ರ ತೊಟ್ಟ ಕೊರಿಯರಣ್ಣನ ನಿರೀಕ್ಷೆಯಲ್ಲಿದ್ದ ನನಗೆ ಕಂಡಿದ್ದು ಮುಳ್ಳಿನ ಮೇಲೆ ನಿಂತಿದ್ದಂತೆ, ಚಡಪಡಿಸುತ್ತಾ ನಿಂತಿದ್ದ ಹೆಂಗಸಿನ ಮುಖ.

ಅವಳ ಮುಖಚರ್ಯೆ ಭಾರತೀಯತೆಯನ್ನು ಸಾರಿದರೂ ನನ್ನ ಪರಿಚಿತಳಂತೂ ಅಲ್ಲ! ಇವಳಾರಿರಬಹುದು? ಈ ಹೊತ್ತಿನಲ್ಲಿ ನನ್ನಲ್ಲೇನು ಕೆಲಸ? ಬಾಗಿಲು ತೆರೆಯಲೇ? ಬೇಡವೇ? ಅಪರಿಚಿತರಿಗೆ ಬಾಗಿಲು ತೆರೆದು ಅಪಾಯವನ್ನು ಆಹ್ವಾನಿಸಿಕೊಂಡವರ- ಅಲ್ಲಿ ಇಲ್ಲಿ ಓದಿದ, ಕೇಳಿದ ಘಟನೆಗಳೆಲ್ಲಾ ನೆನಪಾಗಿ ಕೈ ಚಿಲುಕದತ್ತ ಸರಿಯಲು ಅನುಮಾನಿಸಿತು. ಕ್ಷಣವೊಂದು ಯುಗವಾದಂತೆ ಚಡಪಡಿಕೆಯಲ್ಲಿದ್ದ ಹೆಂಗಸು ಮತ್ತೊಮ್ಮೆ ಕರೆಘಂಟೆ ಒತ್ತಿದಳು. ಯೋಚನೆಗಳನ್ನು ತಳ್ಳಿ ಬಾಗಿಲು ತೆರೆದೆ.

ಅವಳು ಸರಕ್ಕನೆ ನನ್ನನ್ನು ಸರಿಸಿ ಒಳಬಂದಿದ್ದು ನನ್ನಲ್ಲಿ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿತು. ನನ್ನ ಮಾತಿಗೆ ಕಾಯದೆ ಆತುರದಿಂದ ಅವಳು ತನ್ನ ಪರಿಚಯ ಮಾಡಿಕೊಂಡಳು. ಅವಳ ಮನೆ ಇರುವುದು ನನ್ನ ನೆರೆಹೊರೆಯಲ್ಲಿಯೇ ಎಂದಳು. ತನ್ನ ಮನೆ ನಂಬರ್ ಹೇಳಿದಳು. ಆ ಮನೆ ನಾನು ನಿತ್ಯ ಕಾರೋಡಿಸಿಕೊಂಡು ಹೋಗಿಬರುವ ಹಾದಿಯಲ್ಲಿಯೇ ಇರುವುದೆಂಬುದು ನನ್ನರಿವಿಗೆ ಹೊಳೆಯಿತು. ಆ ಮನೆಯ ಎದುರು ಆಗೀಗ ಆಕೆಯನ್ನು ಕಾರಿನ ಕಿಟಕಿಯಿಂದ ಅಸ್ಪಷ್ಟವಾಗಿ ಕಂಡದ್ದೂ ನೆನಪಾಗಿ ಆತಂಕ ಮರೆಯಾಗಿ ನಿಂತೇ ಇದ್ದ ಅವಳನ್ನು ಕುಳ್ಳಿರಿಸಿದೆ. ಮುಳ್ಳಿನ ಮೇಲೆ ಕೂತಂತೆ ತಲ್ಲಣಿಸುತ್ತಿದ್ದ ಅವಳು, ‘ನಿನ್ನಿಂದ ಒಂದು ಚಿಕ್ಕ ಸಹಾಯವಾಗಬೇಕು? ದಯವಿಟ್ಟು ಮಾಡುತ್ತೀಯಾ?…’ ಎಂದಳು. ಇದು ನನ್ನಿಂದ ಏನೋ ಪಡೆಯಲು, ಬಹುಶಃ ಹಣಕಾಸಿನ ನೆರವಿಗೆ ಇದು ಪೀಠಿಕೆ ಎಂದುಕೊಳ್ಳುತ್ತಾ, ‘ನನಗೆ ಕೆಲಸವಿದೆ… ಅದೇನು ಬೇಗ ಹೇಳು…’ ಎಂದೆ, ನಿರಾಸಕ್ತಿಯ ದನಿಯಲ್ಲಿ.

ಅವಳು ತನ್ನ ಕೈಚೀಲದಿಂದ ನೂರರ, ಐವತ್ತರ ನಾಲ್ಕಾರು ಡಾಲರು ನೋಟುಗಳನ್ನು ತೆರೆದು ನನ್ನ ಮುಂದಿಟ್ಟಳು. ನಾನು ಆಶ್ಚರ್ಯದಿಂದ ‘ಈ ಹಣವನ್ನು ನನಗೇಕೆ ಕೊಡುತ್ತಿದ್ದೀಯಾ?’ ಕೇಳಿದೆ. ‘ಈ ಹಣ ನಿನಗಲ್ಲ. ಇದನ್ನು ನೀನು ಹೇಗಾದರೂ ಮಾಡಿ ನನ್ನ ಮಕ್ಕಳಿಗೆ ತಲುಪಿಸಬೇಕು. ನನ್ನ ಹಿರಿಯ ಮಗನೂ, ನಿನ್ನ ಮಗನೂ ಒಂದೇ ತರಗತಿಯಲ್ಲಿಯೇ ಓದುತ್ತಿದ್ದಾರೆಂದು ನನಗೆ ಗೊತ್ತಿದೆ. ಹಾಗಾಗಿ ನಿನ್ನಿಂದ ಈ ಕೆಲಸ ಈ ಸಾಧ್ಯವೆಂದು ಬಂದಿದ್ದೇನೆ.’ ಎಂದು ತನ್ನ ಮಗನ ಹೆಸರು, ಚಹರೆಗಳನ್ನು ಹೇಳಿ ದೈನ್ಯದಿಂದ ಕುಳಿತಳು. ‘ನಿನ್ನ ಮಗನಿಗೆ ನೀನೇ ಕೊಡಬಹುದಲ್ಲ? ನಾನೇಕೆ?’ ನನ್ನಲ್ಲಿ ತುಂಬಿ ತುಳುಕುತ್ತಿದ್ದ ಪ್ರಶ್ನೆಗಳು… ‘ನಾನು ಈಗ ಆ ಮನೆಯಲ್ಲಿಲ್ಲ. ನನ್ನ ಗಂಡ ಮಕ್ಕಳನ್ನು ಮಾತ್ರ ಮನೆಯಲ್ಲಿಟ್ಟುಕೊಂಡು ನನ್ನನ್ನು ಮನೆಯಿಂದ ಹೊರಹಾಕಿದ್ದಾನೆ. ಅದೊಂದು ದೊಡ್ಡ ಕಥೆ. ಮತ್ತೆಂದಾದರೂ ನಿನ್ನ-ನನ್ನ ಭೇಟಿಯಾದರೆ ಆಗ ಹೇಳುತ್ತೇನೆ. ಸದ್ಯಕ್ಕೆ ನಾನು ಗೆಳತಿಯೊಬ್ಬಳ ಮನೆಯಲ್ಲಿದ್ದೇನೆ. ಅವಳ ನೆರವಿನಿಂದ ರೆಸ್ಟೊರೆಂಟೊಂದರಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿ ದುಡಿದು ಉಳಿಸಿದ ಹಣವನ್ನು ನನ್ನ ಮಕ್ಕಳಿಗೆ ತಲುಪಿಸಬೇಕೆನ್ನಿಸಿತು. ನನ್ನ ಮನೆಯ ಮುಂದೆಯೇ ಹಾದುಬಂದೆ, ಗಂಡನ ಕಾರು ಕಾಣಿಸಿತು. ಹಾಗಾಗಿ ಮಕ್ಕಳನ್ನು ನೋಡಲು ಸಾಧ್ಯವಾಗಲಿಲ್ಲ. ನಾನು ಹೆಚ್ಚು ಹೊತ್ತು ಇಲ್ಲಿ ಇರುವಂತಿಲ್ಲ ; ಇದ್ದರೆ ನೀನೂ ತೊಂದರೆಯಲ್ಲಿ ಸಿಲುಕುತ್ತೀ. ನನಗೆ ಸಹಾಯ ಮಾಡು, ನಿನ್ನನ್ನು ನಂಬಿದ್ದೇನೆ…’ ಎಂದು ನನ್ನ ಕೈಯನ್ನೊಮ್ಮೆ ಮೆಲ್ಲನೆ ಒತ್ತಿ, ಸುರಿಯುತ್ತಿದ್ದ ಕಣ್ಣೀರನ್ನು ತೊಡೆದುಕೊಳ್ಳಲೂ ಪುರಸೊತ್ತಿಲ್ಲದವಳಂತೆ, ತೆರೆದೇ ಇದ್ದ ಬಾಗಿಲಿನಿಂದೋಡಿ ಮರೆಯಾದಳು. ಬಿರುಬಿಸಿಲಿನ ಈ ಮಧ್ಯಾಹ್ನದಲ್ಲಿ ನಾನು ಕುಳಿತೇ ಕನಸು ಕಾಣುತ್ತಿದ್ದೇನೆಯೇ? ಎಂದುಕೊಂಡೆ : ನನ್ನ ಮುಂದಿದ್ದ ಡಾಲರು ನೋಟುಗಳು ಅಲ್ಲವೆಂದವು.

***
`vijaya next’ ಸಾಪ್ತಾಹಿಕದ ‘ಅವಳ ಡೈರಿ’ ಅಂಕಣದಲ್ಲಿ ಪ್ರಕಟವಾಗಿದೆ.

ಇದು ಕ್ರಿಸ್‍ಮಸ್ ಮಾಸ!

Posted on December 24th, 2011 in ಕವನಗಳು by sritri

ಇದು ಕ್ರಿಸ್‍ಮಸ್ ಮಾಸ !

ನವ ವರುಷವು ಬರುವ ಮೊದಲೇ
ಭುವಿಗಿಳಿದಿದೆ ಉಲ್ಲಾಸ
ಸ೦ಭ್ರಮವಿದೆ ಸ೦ತಸವಿದೆ
ಇದು ಕ್ರಿಸ್‍ಮಸ್ ಮಾಸ!

ಮನೆ ಮನೆಯ ಅ೦ಗಳದಲಿ
ಮನ ಸೆಳೆಯುವ ನೋಟ
ಇಳೆಯ ಅರಸಿ ಬ೦ದ೦ತಿದೆ
ನ೦ದನದ ತೋಟ!

ಹಸಿರಿಲ್ಲದ ಮರಗಿಡದಲಿ
ಮಾಗಿದೆ ಹಸಿ ಗಾಯ
ಹಿಮ ಸವರಿದೆ ಸವಿಲೇಪ
ಹಳೆಯ ನೋವು ಮಾಯ!

ಎಲೆಗಳಿಲ್ಲ ಆದರೇನು?
ಹೊನಲಾಗಿದೆ ಹಿಗ್ಗು
ಬೋಳು ರೆ೦ಬೆ ಕೊ೦ಬೆಯಲ್ಲೂ
ಬರೀ ಬೆಳಕಿನದೇ ಮೊಗ್ಗು!

ಫಳಗುಟ್ಟುವ ದೀಪಮಾಲೆ
ನಗುತಿದೆ ನಿಶೆ ಹೆರಳು
ದೀಪೋತ್ಸವ ನೆನಪಿಸುತಿದೆ
ಕಾರ್ತೀಕದ ಸವಿ ಇರುಳು!

ದೇಶ ಭಾಷೆಯ ಗೋಡೆ ಉರುಳಿವೆ
ಮೊಗದಿ ಬಿರಿದಿದೆ ಮುಗುಳ್ನಗೆ
ಹೃದಯ ಹೃದಯಕೆ ಸ್ನೇಹ ಸೇತುವೆ
ಒಲುಮೆ ಉಡುಗೊರೆ ಪೆಟ್ಟಿಗೆ!

ಬಯಕೆ ಮೂಟೆಯ ಹೊತ್ತು ಬರುತಾನ೦ತೆ ಸಾ೦ತ
ಹಿಮದ ಚಿಗರೆಯನೇರಿ, ಹೊಗೆಯ ಕೊಳವೆಲಿ ತೂರಿ
ಹಾರೈಸುತ್ತೇನೆ ನಾನು: ಖುಷಿಗಳ ತೆರೆದು ಹ೦ಚುವ ತಾತ
ನಮ್ಮನೆಗೆ ಈಬಾರಿ ಬ೦ದೇಬಿಡಬಾರದಾ೦ತ!

“ಹ್ಯಾಪಿ ಕ್ರಿಸ್‍ಮಸ್ ಮೆರ್ರಿ ಕ್ರಿಸ್‍ಮಸ್”
ಕನವರಿಸಿದೆ ಮನಸು
ಶುಭ ತರಲಿದೆ ಈ ಹಬ್ಬ
ಗರಿ ಕೆದರಿದೆ ಕನಸು!

ಮನಸು ಮನಸಲಿ ಮೈತ್ರಿ ಹಾಯಲಿ
ಭೀತಿವಾದದ ಭೂತ ಸಾಯಲಿ!
ಕ್ರಿಸ್ತ ಕರುಣೆಯು ಜಗವ ಗೆಲ್ಲಲಿ
ಶಾಂತಿ ಎಲ್ಲೆಡೆ ಸಲ್ಲಲಿ!

********************

(ಡಿಸೆಂಬರ್.೨೩.೨೦೦೩)

Next Page »