ಕರ್ನಾಟಕ - ಚನ್ನವೀರ ಕಣವಿ

Posted on July 30th, 2006 in ಚೆನ್ನವೀರ ಕಣವಿ , ಕವಿ-ಕಾವ್ಯ by sritri

ಕವಿ - ಚನ್ನವೀರ ಕಣವಿ

ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ

ಹೊಸೆದ ಹಾಗೆ ಹುರಿಗೊಳ್ಳುವ
ಗುರಿ ತಾಗುವ ಕನ್ನಡ
ಕುರಿತೋದದ ಪರಿಣತಮತಿ
ಅರಿತವರಿಗೆ ಹೊಂಗೊಡ

ಪಡುಗಡಲಿನ ತೆರೆಗಳಂತೆ
ಹೆಡೆ ಬಿಚ್ಚುತ ಮೊರೆಯುವ
ಸಹ್ಯಾದ್ರಿಯ ಶಿಖರದಂತೆ
ಬಾನೆತ್ತರ ಕರೆಯುವ

ಗುಡಿ ಗೋಪುರ ಹೊಂಗಳಸಕೆ
ಚೆಂಬೆಳಕಿನ ಕನ್ನಡ
ನಮ್ಮೆಲ್ಲರ ಮೈಮನಸಿನ
ಹೊಂಗನಸಿನ ಕನ್ನಡ

ತ್ರಿಪದಿಯಿಂದ ಸಾಸಿರಪದಿ
ಸ್ವಚ್ಚಂದದ ಉಲ್ಲಸ
ಭಾವಗೀತ ಮಹಾಕಾವ್ಯ
ವೀರ ವಿನಯ ಸಮರಸ

ಹಳ್ಳಿ-ಊರು ನಗರ-ಜಿಲ್ಲೆ
ಮೊಗೆದ ಹೊಗರು ಕನ್ನಡಿ
ಎಲ್ಲ ದಿಸೆಗು ಚೆಲ್ಲುವರೆದ
ಚೈತನ್ಯದ ದಾಂಗುಡಿ

ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ

****

ಪಾರ್ವತಮ್ಮನವರು ಎಲ್ಲಿ? ಕಾಣ್ತಾ ಇಲ್ಲ?

Posted on July 28th, 2006 in ಅನಿಸಿದ್ದು by sritri

 ಪಾರ್ವತಮ್ಮ ರಾಜ್‍ಕುಮಾರ್

ಚಿತ್ರಲೋಕದಲ್ಲಿ ಪ್ರತಿವಾರ ಧಾರಾವಾಹಿಯಾಗಿ ಬರುತ್ತಿದ್ದ ಪಾರ್ವತಮ್ಮನವರ ಅಂಕಣವನ್ನು ತಪ್ಪದೆ ಓದುತ್ತಿದ್ದವರಲ್ಲಿ ನಾನೊಬ್ಬಳು. ಚಿತ್ರರಂಗದ ಕುರಿತು ಅವರು ನೀಡುತ್ತಿದ ಒಳವಿವರಗಳು ಓದಲು ತುಂಬಾ ಚೆನ್ನಾಗಿರುತ್ತಿತ್ತು. ನಿರ್ಮಾಪಕಿಯಾಗಿ, ವಿತರಕಿಯಾಗಿ, ನಟನ ಪತ್ನಿಯಾಗಿ,ತಾಯಿಯಾಗಿ ಅವರ ಅನುಭವ ಬಹಳ ದೊಡ್ಡದು. ಪ್ರಸಿದ್ಧ ಪುರುಷರ ಪತ್ನಿಯರು ತಮ್ಮ ಪತಿಯ ಪ್ರಭಾವಳಿಯಲ್ಲಿ ಲಯವಾಗಿ ಹೋಗುವುದೇ ಹೆಚ್ಚು. ಆದರೆ ಪಾರ್ವತಮ್ಮ ರಾಜ್‍ರಂತಹ ಮೇರು ವ್ಯಕ್ತಿತ್ವದ ಜೊತೆಯಲ್ಲಿದ್ದುಕೊಂಡೇ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡವರು. ಇಂತಹ ಪಾರ್ವತಮ್ಮನಂತಹ ಪಾರ್ವತಮ್ಮನೇ ರಾಜ್ ಮೃತದೇಹದ ಮೇಲೆ ತಲೆ ಇಟ್ಟು ದು:ಖಿಸುತ್ತಿದ್ದಾಗ ಅದೆಷ್ಟು ಜನರ ಕಣ್ತುಂಬಿ ಬಂದಿತೋ?

ರಾಜ್ ಕುರಿತು ಈಗಾಗಲೇ ಅದೆಷ್ಟೋ ಜನ ಬರೆದಿರಬಹುದಾದಾರೂ, ರಾಜ್ ಅವರನ್ನು ಅತಿ ಹತ್ತಿರದಿಂದ ಕಂಡಿರುವ ಪತ್ನಿಯೋ, ಮಕ್ಕಳೋ ಅವರ ಬಗ್ಗೆ ಬರೆದಾಗ ಅದರಲ್ಲಿ ಮತ್ತಷ್ಟು ಆತ್ಮೀಯವೆನಿಸುವ ವಿವರಗಳಿರುತ್ತವೆ. ಈ ಕಾರಣದಿಂದಲೇ  ಆತ್ಮಚರಿತ್ರೆಗಳನ್ನು ಓದುವುದು ಕೂಡ ನನಗೆ ಬಹಳ ಇಷ್ಟ. ಎಲ್ಲವನ್ನೂ ಅಲ್ಲ. ಕೆಲವರು ತಮ್ಮ ಆತ್ಮಚರಿತ್ರೆಯನ್ನು ತಮಗಾಗದವರ ಮಾನಾಪಹರಣಕ್ಕೆ ಬಳಸಿಕೊಂಡಿದ್ದೂ ಇದೆ.

ಬೀಚಿಯವರು ತಮ್ಮ ಭಯಾಗ್ರಫಿಯಲ್ಲಿ ಅನಕೃ ಕುರಿತು ಬರೆದಿರುವ ಅಭಿಮಾನದ ಮಾತುಗಳು ನಮ್ಮ ಕಣ್ಣ ಮುಂದೆ ಈಗಾಗಲೇ ನೆಲೆಯಾಗಿರುವ ಅನಕೃ ಅವರ ಧೀಮಂತ ವ್ಯಕ್ತಿತ್ವದ ಜೊತೆಗೆ , ತಮಾಷೆ,ತುಂಟತನದ  ಅವರ ಇನ್ನೊಂದು ಮುಖವನ್ನು ತೆರೆದಿಡುತ್ತ್ತವೆ. ಯಾರೋ ಎದುರಿಗೆ ಕುಳಿತು ಕಥೆ ಹೇಳಿದಂತೆ ಅನ್ನಿಸುವ ಇಂತಹ ಆಪ್ತ ಬರಹಗಳಲ್ಲಿ ಕೆಲವು ಅಪರೂಪದ ಮಾಹಿತಿಗಳಿರುತ್ತವೆ. ಅವು ಎಲ್ಲೂ ಅಚ್ಚಾಗಿರದ ಹೊಚ್ಚ ಹೊಸ ವಿಷಯಗಳು.

ಚಿತ್ರಲೋಕದಲ್ಲಿ ಇಂಗ್ಲೀಷಿನಲ್ಲಿ ಪ್ರಕಟವಾಗುತ್ತಿದ್ದ ಪಾರ್ವತಮ್ಮ ಅಂಕಣ ಕನ್ನಡಪ್ರಭದಲ್ಲಿ ಪ್ರತಿ ಮಂಗಳವಾರ ಪ್ರಕಟವಾಗ ತೊಡಗಿದ ಮೇಲೆ ಪ್ರತಿವಾರ ಅದಕ್ಕಾಗಿ ಕಾಯುವಂತಾಗುತ್ತಿತ್ತು. ಈಚೆಗೆ ಕೆಲವು ವಾರಗಳಿಂದ ಯಾಕೋ ಪಾರ್ವತಮ್ಮ ಅಂಕಣ ಪ್ರಕಟವಾದಂತಿಲ್ಲ. ಇಳಿ ವಯಸ್ಸು, ಪತಿಯ ಮರಣದ ವ್ಯಥೆ, ಚಿತ್ರರಂಗದ ಜವಾಬ್ಧಾರಿಗಳು ಗಟ್ಟಿ ವ್ಯಕ್ತಿತ್ವದ “ವಜ್ರೇಶ್ವರಿ”ಯನ್ನೂ ಮೆತ್ತಗಾಗಿಸಿದೆಯೋ ಏನೋ.

ಈ ಅಂಕಣ ಇಲ್ಲಿಗೇ ನಿಲ್ಲದೆ ಮತ್ತೆ ಮುಂದುವರೆಯಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಇದನ್ನು ಸಾಧ್ಯವಾಗಿಸುವಂತೆ ಚಿತ್ರಲೋಕದ ವೀರೇಶ್ ಅವರಲ್ಲಿ ನನ್ನ ಸವಿನಯ ಮನವಿ. yahoo2

***

ಹಾಡು ಹಳೆಯದಾದರೇನು?

Posted on July 26th, 2006 in ಅನಿಸಿದ್ದು by sritri

“ಹಳೆಯ ಹಾಡು ಹಾಡು ಮತ್ತೆ
ಅದನೇ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ”

ಜಿ.ಎಸ್.ಶಿವರುದ್ರಪ್ಪನವರ ಈ ಗೀತೆ ನನಗೀಗ ಮತ್ತಷ್ಟು ಅರ್ಥಪೂರ್ಣ ಅನ್ನಿಸುತ್ತಿದೆ. ಯಾಕೆ ಗೊತ್ತಾ? ನನಗೆ ಹಳೆಯ ಹಾಡುಗಳ ಭಂಡಾರ ಸಿಕ್ಕಿದೆ.  ಕೆಲವು ದಿನಗಳ ಹಿಂದೆ  ನಮ್ಮ ಮಿತ್ರರೊಬ್ಬರ ಮನೆಗೆ ಹೋಗಿದ್ದಾಗ ಆ ಮಾತು-ಈ ಮಾತು ಆಡುತ್ತಿದ್ದಾಗ ಪಿ.ಕಾಳಿಂಗರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಹಾಡಿನ ಬಗ್ಗೆ ಮಾತು ಬಂದಿತು.ನಾನು ಈಚೆಗೆ ಈ ಹಾಡನ್ನು ಕೇಳೇ ಇಲ್ಲ, ತುಂಬಾ ದಿನಗಳಾಯಿತು” ಎಂದೆ. ಅವರು - ”ಆ ಹಾಡು ನನ್ನಲ್ಲಿದೆ, ಬೇಕಾದರೆ ತೆಗೆದುಕೊಂಡುಹೋಗಿ” - ಎಂದು ತಮ್ಮಲ್ಲಿದ್ದ ಹಾಡುಗಳ ಸಂಗ್ರಹವನ್ನು ತೋರಿಸಿದರು.

ಅಲ್ಲಿದ್ದದ್ದು ತುಂಬಾ ಹಳೆಯ ಚಿತ್ರಗಳ ಕ್ಯಾಸೆಟ್‍ಗಳು.   ಅವುಗಳನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಲ್ಲ.   ಈಗ ಆಸ್ಪತ್ರೆಯಲ್ಲಿ ಕೊನೆಯ ಗಳಿಗೆಗಳನ್ನು ಎಣಿಸುತ್ತಿರುವ ಎಸ್.ಕೆ. ಕರೀಂಖಾನರ ಸ್ವರ್ಣಗೌರಿ, ಘಂಟಸಾಲರ ಶಿವಶಂಕರಿ….ಹಾಡಿರುವ ಜಗದೇಕವೀರನ ಕಥೆ, ಸೋರಟ್ ಅಶ್ವತ್ಥ್ ಸಾಹಿತ್ಯ ನೀಡಿರುವ ಕೆಲವು ಚಿತ್ರಗಳು, ಪಿ.ಬಿ. ಶ್ರೀನಿವಾಸ್ ಹಾಡಿರುವ ತುಂಬಾ ಹಳೆಯ ಚಿತ್ರಗೀತೆಗಳು….ಎಲ್ಲಿ ಹುಡುಕಿದರೂ ಸಿಗದ ಅಪರೂಪದ ಗೀತೆಗಳು ಅಲ್ಲಿದ್ದವು. 

ಆದರೆ ಎಲ್ಲವೂ ಕ್ಯಾಸೆಟ್‍ಗಳು. ಈಗಿನ ಹೊಸ ಕಾರುಗಳಲ್ಲಿ ಹಾಕಿಕೊಂಡು ಕೇಳಲು ಸಾದ್ಯವಿಲ್ಲದವು. ಆ ಮಿತ್ರರ ಹಳೆಯ ಹಾಡುಗಳ ಅಭಿಮಾನ ಅದೆಷ್ಟಿದೆಯೆಂದರೆ ಕಾರಿನಲ್ಲಿ ಈ ಹಾಡುಗಳನ್ನು ಕೇಳಲೆಂದೇ ಒಂದು ಟೇಪ್ ರೆಕಾರ್ಡರ್ ಇಟ್ಟುಕೊಂಡಿದ್ದಾರಂತೆ!

ಒಂದು ಇನ್ನೊಂದು ಎನ್ನುತ್ತಾ ಸುಮಾರು ಹತ್ತಿಪ್ಪತು ಕ್ಯಾಸೆಟ್ಟುಗಳನ್ನು ಆರಿಸಿಕೊಂಡೆ.  ಮನೆಗೆ ಬಂದು ಮೂಲೆಗೆ ಬಿಸಾಕಿದ್ದ ಕ್ಯಾಸೆಟ್ ಪ್ಲೇಯರಿನಲ್ಲಿ ಆ ಹಾಡುಗಳನ್ನೆಲ್ಲ ಕೇಳಿದೆ. ಒಂದಕ್ಕಿಂತ ಒಂದು ಸುಂದರ.  ಎಷ್ಟೊಂದು ಚೆಲುವಾಗಿ ಹೆಣೆಯಲ್ಪಟ್ಟ ಗೀತೆಗಳು!   ಈಗಿನ ಹಾಡುಗಳಿಗೆ ಬಳಸುವ ವಿವಿಧ ಬಗೆಯ ಆಧುನಿಕ ವಾದ್ಯಗಳಿಲ್ಲದೆಯೂ ಕಿವಿಗಿಂಪೆನಿಸುವ ತಣ್ಣನೆಯ ಸಂಗೀತ ಅದು.  ಸೀಮಿತ ವಾದ್ಯಗಳನ್ನು ಬಳಸಿದ ಕೆಲವು ಹಾಡುಗಳು, ಇಂದಿನ ಅಬ್ಬರದ, ಆಡಂಬರದ ಸಂಗೀತದ ಮುಂದೆ ಬಡಕಲು ಅನ್ನಿಸುತ್ತದೆ ಕೂಡ.  ಹಳೆಯ ಹಾಡುಗಳನ್ನೇ ರೀಮಿಕ್ಸಿನ ಗಾಣದಲ್ಲಿ ಅರೆದು, ಹಣ ದೋಚುತ್ತಿರುವ ಈ ಹೊತ್ತಿನಲ್ಲಿ,  ಹಳೆಯ ಹಾಡುಗಳದು ಹುಡುಕಿದರೂ ಸಿಗದ ದುರ್ಗತಿ!

ಈಗ,  ಕ್ಯಾಸೆಟ್‍ನಲ್ಲಿ ತುಂಬಿರುವ ಗಾನಸುಧೆಯನ್ನು mp3ಗೆ ಪರಿವರ್ತಿಸಿ, ಸಿಡಿಗಳಿಗೆ ತುಂಬಿಸಬೇಕಾಗಿದೆ. ಕ್ಯಾಸೆಟ್‍ನ್ನು ಹಿಂತಿರುಗಿಸುವಾಗ ನಿಮಗೂ ಒಂದು ಸಿಡಿ ತಲುಪಿಸುತ್ತೇನೆ ಎಂದು ನಮ್ಮ ಸ್ನೇಹಿತರಿಗೆ ನೀಡಿದ ಆಶ್ವಾಸನೆಯನ್ನು ನಿಜ ಮಾಡಬೇಕಾಗಿದೆ. ನಂಬಿಕೆ ಉಳಿಸಿಕೊಳ್ಳಬೇಕಾಗಿದೆ. yahoo2

Next Page »