ಎಲ್ಲರಿಗೂ ದಸರ ಹಬ್ಬದ ಶುಭಾಶಯಗಳು!

Posted on September 29th, 2006 in ಅನಿಸಿದ್ದು by sritri

ನಿಮಗೆಲ್ಲರಿಗೂ ದಸರ ಹಬ್ಬದ ಹಾರ್ದಿಕ ಶುಭಾಶಯಗಳು!

ಈ ಬ್ಲಾಗಿನಲ್ಲಿ ವಿಜಯದಶಮಿ ಹಬ್ಬದ ಬಗೆಗೆ ಮಾತಾಡಿಕೊಂಡಿದ್ದಾರೆ. ನನಗೂ ಅಷ್ಟೇ.  ವಿಜಯದಶಮಿಯನ್ನೂ ಸೇರಿಸಿಕೊಂಡ ದಸರಾ ಹಬ್ಬವೇ ತುಂಬಾ ಇಷ್ಟ. ಇದು ಎಲ್ಲಾ ಹಬ್ಬಗಳಂತಲ್ಲದೆ ನಮ್ಮ ಭಾವನೆಗಳೊಡನೆ ಬೆಸೆದುಕೊಂಡಿರುವ ಹಬ್ಬ. ನಮ್ಮ ನಾಡು-ನುಡಿಗಳೊಂದಿಗೆ  ಗುರುತಿಸಿಕೊಂಡಿರುವ ಹಬ್ಬ.  ಕುಲದೇವರಾದ ತಿರುಪತಿ ತಿಮ್ಮಪ್ಪನ ಮದುವೆ ನಡೆದಿದ್ದು ಈಗಲೇ ಎಂಬುದು ನಮ್ಮ ಮನೆಯಲ್ಲಿ ಗರಿಗೆದರುತ್ತಿದ್ದ ಸಂಭ್ರಮಕ್ಕೆ ಮತ್ತೊಂದು ಕಾರಣ.  ಹತ್ತು ದಿನವೂ ನಿರಂತರವಾಗಿ ಉರಿಯುವ ತುಪ್ಪದ ದೀಪಗಳು, ಶ್ರೀನಿವಾಸ ಕಲ್ಯಾಣ, ಬನ್ನಿ ಸೊಪ್ಪು , ಶಾವಿಗೆ ಪಾಯಸ  ಎಲ್ಲವೂ ನವರಾತ್ರಿಯ ಜೊತೆಗೆ ಹಿಂಬಾಲಿಸಿಕೊಂಡು ಬರುವ ಸವಿ ಸವಿ ನೆನಪು..ಸಾವಿರ ನೆನಪು! ಎದೆಯಾಳದಲ್ಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು!

ಆ ಕಾಲದ ದಸರ ವೈಭವವ ನ್ನು ನಾವು ಕಂಡಿಲ್ಲ. ಮಹಾರಾಜರ ಒಡ್ದೋಲಗ ನಮಗೆ ಬರೀ ಚಿತ್ರಗಳಲ್ಲಿ ಕಂಡ ದೃಶ್ಯ ಮಾತ್ರ.   ಆದರೆ ಅಂದಿನ ಸಡಗರವನ್ನು ಕಂಡಿದ್ದ ಹಳಬರನ್ನು ದಸರಾ ಬಂತೆಂದರೆ ಅಸಹನೀಯ ವ್ಯಥೆ ಆವರಿಸಬಹುದೇನೋ.  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ , ಸುವರ್ಣ ಸಿಂಹಾಸನದ ಮೇಲೆ ಯಾವುದೇ ಸಂಭ್ರಮವಿರದ ಮುಖಭಾವ ಹೊತ್ತು ಕೂತಿರುವ ದೃಶ್ಯವನ್ನು ಟೀವಿಯಲ್ಲಿ ನೋಡಿ ಮರುಕವಾಯಿತು. ಹಿಂದಿದ್ದ ಎಲ್ಲಾ ವೈಭವಗಳನ್ನೂ ಕಳೆದುಕೊಂಡು ನಾಮಕಾವಸ್ತೆ ದರ್ಬಾರ್ ನಡೆಸುವ ಯುವರಾಜರ ಮನಸ್ಸಿನಲ್ಲಿರುವ ಭಾವನೆಗಳೇನಿರಬಹುದು ? ಊಹಿಸಲು ಸಾಧ್ಯವಾಗಲಿಲ್ಲ!

*                   *                     *

ಶುಭಂ - ಹನಿ ಹನಿ ಇಬ್ಬನಿ

Posted on September 25th, 2006 in ಕವಿರಾಜ್, ಹಾಡು ಹಬ್ಬ by sritri

ಚಿತ್ರ - ಶುಭಂ (೨೦೦೫)
ಸಾಹಿತ್ಯ - ಕವಿರಾಜ್
ಸಂಗೀತ - ಗುರುಕಿರಣ್
ಗಾಯಕಿ - ಚಿತ್ರ

ಹಾಡು ಕೇಳಿ 

ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಚಿಲಿಪಿಲಿ ಹಕ್ಕಿ ನಿನ್ನ ಭಾಷೆ ಕಲಿಯೋ ಆಸೆ

ಮುಗಿಲ ತಂಪಲಿ ಕೊಳಲ ಇಂಪಲಿ
ಅರಳೋ ಮೊಗ್ಗಿನ ಹರಡೋ ಕಂಪಲಿ
ಬೆರೆಯೋ ನೂರಾಸೆಯು

ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಇನಿದನಿ ಗುಬ್ಬಿ ನಿನ್ನ ಬಾಷೆ ಕಲಿಯೋ ಆಸೆ |

ಬಿಳಿ ಬಿಳಿ ಮೋಡಕೆ ಬಗೆ ಬಗೆ ಬಣ್ಣ
ಬಳಿಯೋಕೆ ಆಸೆಯು
ಗಗನ ಭೂಮಿಯ ಚುಂಬಿಸೋ ತಾಣ
ನೋಡೋಕೆ ಆಸೆಯು
ಎಲೆ ತಂಗಾಳಿ ನಿನ್ನ ಜೋಕಾಲಿ
ಹೆಣೆದು ನಾ ಆಡಲೇ |

ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಚಿಲಿಪಿಲಿ ಗುಬ್ಬಿ ನಿನ್ನ ಭಾಷೆ ಕಲಿಸೋ ಆಸೆ |

ನದಿಯೇ ಎಲ್ಲಿಗೆ ಹರಿಯುವೆ ಹೀಗೆ
ಬರಲೇ ನಾನೂ ಜೊತೆ
ಮರವೇ ಏತಕೆ ನಿಂತಲೇ ನಿಂತೆ
ನಿನದು ಏನೇ ಕಥೆ
ಮಳೆ ಬಿಲ್ಲಿನ ಮನೆ ಮಾಡೋಣ
ಕುಳಿತು ಮಾತಾಡಲು |

*         *        *

ನಾನು ಕೊಂದ ಗಿಡ!

Posted on September 20th, 2006 in ಅನಿಸಿದ್ದು by sritri

ನಿನ್ನೆ ಸಂಜೆ ದಿನಸಿ ಪದಾರ್ಥಗಳನ್ನು ತಳ್ಳುಗಾಡಿಗಳಲ್ಲಿ ತುಂಬಿಕೊಳ್ಳುತ್ತಿದ್ದೆ. ತರಕಾರಿಗಳು ಎಂದಿನಂತಿಲ್ಲದೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದವು. ಅವೂ ಕೂಡ ತಾಜಾ ಇರಲಿಲ್ಲ.  ಕ್ಯಾಬೇಜ್, ಕಾಲಿಫ್ಲವರಿಗೆ ತುಂಬಾ ರಾಸಾಯನಿಕ ಸಿಂಪಡಿಸಿರುತ್ತಾರೆ, ದ್ರಾಕ್ಷಿಯಂತೂ ವಿಷದಲ್ಲಿಯೇ ಬೆಳೆಯುವ ಹಣ್ಣು ಎಂದು ಬರೆದು, ಪೆಜತ್ತಾಯರು ಬೇರೆ ಹೆದರಿಸಿದ್ದರು.  ಇಲ್ಲಿ ಬೆಳೆಯುವ ಸೊಪ್ಪುಗಳಿಗೆಲ್ಲ ಏನೋ ರೋಗ ಬಂದಿದೆಯಂತೆ ಎಂದು ಎರಡು ದಿನದ ಹಿಂದೆ ಟೀವಿ ವಾರ್ತೆಯಲ್ಲಿ ಬಂದಿತ್ತು. ಈರುಳ್ಳಿ ವಾಸನೆ ಆಗಲ್ಲ, ಬೆಳ್ಳುಳ್ಳಿ ಸೇರಲ್ಲ. ತಿನ್ನೋದೇನು? ಅಂತ ಹುಡುಕುತ್ತಿದ್ದಾಗ ನನ್ನ ಸ್ನೇಹಿತೆಯೊಬ್ಬರ ಫೋನ್ ಬಂತು.

ಅವರು ಹೇಳುತ್ತಿದ್ದರು - “ಇವತ್ತು ರಾತ್ರಿ ಟೆಂಪರೇಚರ್ ತುಂಬಾ ಕೆಳಗೆ ಹೋಗುತ್ತದಂತೆ. ಗಿಡಗಳನ್ನೆಲ್ಲ ಮನೆಯೊಳಗೆ ಇಟ್ಟುಕೊಂಡುಬಿಡಿ. ಗುಲಾಬಿ ಹೊರಗೇ ಇರಲಿ ಪರವಾಗಿಲ್ಲ. ಉಳಿದ ಗಿಡಗಳನ್ನು ಒಳಗಿಡಲು ಇದು ಸಕಾಲ.”  ದೂರವಾಣಿ ಮಾಡಿದವರು ಹಲವಾರು ವರ್ಷಗಳಿಂದ ಈ ದೇಶದಲ್ಲೇ ನೆಲೆಸಿದ್ದು, ಗಿಡಗಳನ್ನು ಪೋಷಿಸಿ,ಪಾಲಿಸಿರುವ” ಹೆತ್ತ ತಾಯಿ” ಅನುಭವವಿರುವವರು.  ನಾನು ಮೊದಲೇ ಅವರಲ್ಲಿ ಮಾಡಿಕೊಂಡಿದ್ದ ವಿನಂತಿಯನ್ನು ಮನ್ನಿಸಿ ಈ ಕರೆ ಮಾಡಿದ್ದರು. ಅಯ್ಯೋ ಚಳಿಗಾಲ ಶುರುವಾಗಿ ಬಿಟ್ಟಿತೇ?  ಇಷ್ಟು ದಿನ ಇದ್ದ ಸುಡುಬಿಸಿಲು, ರಾತ್ರಿ ಒಂಭತ್ತರವರೆಗೆ ಇರುತ್ತಿದ್ದ ಬೆಳಕು ಎಲ್ಲ ಬರೀ ಭ್ರಮೆಯೇ ಅನ್ನಿಸತೊಡಗಿತು.

ಇಲ್ಲಿ ಬೇಸಿಗೆಯಲ್ಲಿ ಮೈತುಂಬಿ ಬೆಳೆಯುವ ಗಿಡಗಳನ್ನು ಹೊರಗಿನ ಚಳಿ,ಮಂಜಿನಿಂದ ಕಾಪಾಡಲು ಆ ಗಿಡಗಳನ್ನು ಮನೆಯೊಳಗೆ ತಂದಿಟ್ಟುಕೊಂಡು ಜೋಪಾನ ಮಾಡುತ್ತಾರೆ.  ಆದರೆ ನಾನೇಕೋ ಈ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ.  ಹಿಂದಿನ ಎರಡು ವರ್ಷಗಳಲ್ಲಿಯೂ ಹೊರಗೆ ಬಿಸಿಲಿನಲ್ಲಿ ನಳನಳಿಸುತ್ತಿದ್ದ ಗಿಡಗಳೆಲ್ಲ ಒಳಗೆ ತಂದಿಟ್ಟ ಕೆಲವೇ ದಿನಗಳಲ್ಲಿ ರವಿಯ ವಿರಹವನ್ನು ತಾಳಲಾರೆವೆಂಬಂತೆ ಬಸವಳಿದು ಹೋಗಿದ್ದವು. 

ಗಿಡಗಳನ್ನು ಯಾವಾಗ ಒಳಗೆ ತಂದಿಡಬೇಕೆಂದು ತಿಳಿಯದೆ ನಾನು ಬಸವಣ್ಣನವರು ಹೇಳಿದಂತೆ “ತನ್ನಂತೆ ಪರರ ಬಗೆದೊಡೆ” ಎಂಬ ನಿಯಮವನ್ನೇ ಗಿಡಗಳಿಗೂ ಅನ್ವಯಿಸುತ್ತಿದ್ದೆ.  ಅಂದರೆ ಮನೆಯ ಹೊರಗೆ ನಿಂತು, ಥಂಡಿ ತಡೆಯಲಾರೆ ಎಂದು ನನಗನ್ನಿಸಿದರೆ ಆಗ ಗಿಡಗಳನ್ನು ಒಳಗೆ ವರ್ಗಾಯಿಸುತ್ತಿದ್ದೆ. ಅದು ತಡವಾಗುತ್ತಿತ್ತೋ, ಗಿಡಗಳು ನನಗಿಂತ ಬಹಳ ಸೂಕ್ಷ್ಮ ಸ್ವಭಾವದವುಗಳೋ, ಬೇರಾವ ಕಾರಣವೋ ಗೊತ್ತಿಲ್ಲ. ಗಿಡಗಳು ಮುರುಟಿಹೋಗುತ್ತಿದ್ದವು.  ಒಟ್ಟಿನಲ್ಲಿ ಎಂದೂ ನಮ್ಮ ಮನೆಯಲ್ಲಿ ಪ್ರತಿ ವರ್ಷವೂ ಹೊಸ ಗಿಡ ತಂದು ನೆಡುವುದೇ ಆಗಿದೆ ಹೊರತು ಹಳೆಯದು ಎಂದೂ ಉಳಿದಿಲ್ಲ.

ಈ ನೆಲದಲ್ಲಿ ಬೆಳೆಯುವ ಕೆಲವು ಸಸ್ಯಗಳ ಮೇಲೆ ಚಳಿಗಾಲದ ಹವೆ ಯಾವ ಪರಿಣಾಮವನ್ನೂ ಬೀರದು. ಆದರೆ ಭಾರತದ ಒಣ ಹವಾಮಾನದಲ್ಲಿ ಹಾಯಾಗಿ ಬಾಳುವ ತುಳಸಿ, ಕರಿಬೇವು  ಹವಾಮಾನದಲ್ಲಿ ಸ್ವಲ್ಪ ವೈಪರೀತ್ಯವಾದರೂ ತತ್ತರಿಸಿ ಹೋಗುತ್ತವೆ.  ಕಳೆದ ವರ್ಷ ನನಗೊಂದು ಕಹಿ ಅನುಭವವೂ ಆಗಿದೆ.  ಆಗ ಮನೆಯಲ್ಲಿದ್ದ ಕರಿಬೇವಿನ ಗಿಡ ಸುಮಾರು ದೊಡ್ಡದಾಗಿತ್ತು. ಕುದಿಯುತ್ತಿರುವ ಸಾರಿಗೆ ಆಗೀಗ ನಾಲ್ಕೈದು ಎಲೆಗಳನ್ನು ದಯಪಾಲಿಸುವಷ್ಟು  ಉದಾರಿಯಾಗಿತ್ತು.  ಚಳಿಗಾಲದಲ್ಲಿ ಮನೆಯೊಳಗೆ ತಂದಿಟ್ಟ ಮೇಲೂ  ಸುಮಾರು ದಿನಗಳು ಚೆನ್ನಾಗಿಯೇ ಇತ್ತು. ಒಂದು ದಿನ ಹೊರಗೆ ಹದವಾದ ಹೂ ಬಿಸಿಲಿತ್ತು.  

ನಾನು ಮತ್ತೆ ಬಸವಣ್ಣನವರ ನಿಯಮವನ್ನೇ ಅನುಸರಿಸಿ, ಪಾಪ!  ಕರಿಬೇವಿಗೂ ಸ್ವಲ್ಪ ಬಿಸಿಲು ಬೀಳಲಿ ಎಂದು ಆ ಗಿಡವನ್ನು ತಂದು ಬಿಸಿಲಿಗಿಟ್ಟೆ.  ಒಂದೆರಡು ಘಂಟೆಗಳ ನಂತರ ಮತ್ತೆ ಒಳಗೆ ತಂದಿಟ್ಟೆ. ಅಷ್ಟೇ. ಅದೇನು ವ್ಯತ್ಯಾಸವಾಯಿತೋ ಗೊತ್ತಿಲ್ಲ. ಗಿಡ ಆ ಕ್ಷಣದಿಂದಲೇ ಕಳೆಗುಂದುತ್ತಾ ಹೋಯಿತು. ಪ್ರತಿ ದಿನವೂ ನಾನು ನೋಡನೋಡುತ್ತಿದ್ದಂತೆಯೇ ಕಾಯಿಲೆ ಹಿಡಿದ ಮನುಷ್ಯರಂತೆ ಕ್ಷೀಣಿಸುತ್ತಾ ಹೋಗಿ,  ಒಂದು ದಿನ ಸತ್ತೇ ಹೋಯಿತು!  

ಶ್ರೀನಿ  ಅಶಾವಾದಿಯಂತೆ,  ಈ ಗಿಡ ಮತ್ತೆ ಇದ್ದಕ್ಕಿದ್ದಂತೆ ಒಂದು ದಿನ ಚಿಗುರಲೂ ಬಹುದು. ಈಗಲೇ ಇದನ್ನು ಎಸೆಯುವುದು ಬೇಡ ಅಂದರು. ನಾನೂ ಕೂಡ “ನೀನೊಲಿದರೆ ಕೊರಡು ಕೊನರುವುದಯ್ಯಾ..” ಎಂದು ನಂಬಿದವಳೇ.  ಎಂದೋ ಒಂದು ಸುದಿನ ಈ ಬಾಡಿ ಹೋದ ಗಿಡದಲ್ಲೂ ಜೀವ ಸಂಚಾರವಾದೀತೇನೋ ಎಂದು  ಕಾಯುತ್ತಿದ್ದೆ.  ಆ ಗಿಡವನ್ನು ಹೊರಗೆ ಎಸೆಯದೆ ಹಾಗೆಯೇ ಇರಿಸಿದ್ದೆ. ಆದರೆ ನನ್ನ ಆಸೆ ಫಲಿಸಲಿಲ್ಲ.

ಅಂದು ಬಿಸಿಲಿದೆ ಎಂದು ಗಿಡವನ್ನು ಹೊರಗಿಡದೆ ಇದ್ದಿದ್ದರೆ ಗಿಡ ಸಾಯುತ್ತಿರಲಿಲ್ಲ. ನನ್ನದೇ ತಪ್ಪು ಎಂದು ಹಳಹಳಿಸಿದೆ. ಒಣಗಿ ನಿಂತ ಕರಿಬೇವಿನ ಗಿಡವನ್ನು ನೋಡಿದಾಗಲೆಲ್ಲಾ ಆನಂದರ ಸಣ್ಣ ಕಥೆ ”ನಾನು ಕೊಂದ ಹುಡುಗಿ” ನೆನಪಾಗಿ , ಈ ಗಿಡವನ್ನು ನಾನೇ ಕೈಯಾರೆ ಕೊಂದೆನೇ ಎಂಬ ಅಪರಾಧಿ ಮನೋಭಾವನೆ ಆವರಿಸುತ್ತಿತ್ತು. 

ಈ ಬಾರಿ ಹಾಗಾಗಬಾರದೆಂದೇ ನನ್ನ ಸ್ನೇಹಿತೆಗೆ ಮೊದಲೇ ಹವಾಮಾನ ಮುನ್ಸೂಚನೆ ನೀಡುವಂತೆ ಮನವಿ ಮಾಡಿಕೊಂಡಿದ್ದೆ.  ಅದರಂತೆ,  ಸಕಾಲದಲ್ಲಿ ಗಿಡಗಳನ್ನು ಒಳಗೆ ತಂದು ಬೆಚ್ಚಗೆ ಇಟ್ಟಿದ್ದೇನೆ . ಆದರೆ ಮುಂದಿದೆ ಮಾರಿ ಹಬ್ಬ!   ಮುಂದಿರುವ ಐದಾರು ತಿಂಗಳ ಹಿಮ ಸುರಿಯುವ ಕ್ರೂರ ಚಳಿಗಾಲದಲ್ಲಿ ಗಿಡಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವುದು ಹೇಗೆ? ಈ ಬಗ್ಗೆ ನಿಮಗೇನಾದರೂ ಗೊತ್ತಿದ್ದರೆ ಟಿಪ್ಸ್ ಕೊಡಿ ಪ್ಲೀಸ್…

Next Page »