ಮೋಹನ ಮುರಲಿ - ಗೋಪಾಲಕೃಷ್ಣ ಅಡಿಗ

Posted on December 26th, 2006 in ಕವಿ-ಕಾವ್ಯ by sritri

ಕವಿ - ಗೋಪಾಲಕೃಷ್ಣ ಅಡಿಗ

೧. ರತ್ನಮಾಲಾ ಪ್ರಕಾಶ್ - ಸಂಗೀತ:ಮೈಸೂರು ಅನಂತಸ್ವಾಮಿ

೨. ರಾಜು ಅನಂತಸ್ವಾಮಿ,ಸಂಗೀತಾ ಕಟ್ಟಿ - ಸಂಗೀತ:ಮನೋ ಮೂರ್ತಿ

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ;
ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೇ?

ವಿವಶವಾಯಿತು ಪ್ರಾಣ ; ಹಾ! ಪರವಶವು ನನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

***     ***       ***       ***        ***

ನುಡಿಹಬ್ಬದ ಕೊರಗುಗಳು

Posted on December 20th, 2006 in ಅನಿಸಿದ್ದು by sritri

ಅನಿವಾಸಿಗಳು ಹಣಕಾಸಿನ ವಿಷಯದಲ್ಲಿ ಭಾಗ್ಯವಂತರೆಂದು ಕರುಬುವವರೇ ಹೆಚ್ಚು.  ಆದರೆ ಕೆಲವು ವಿಷಯಗಳಲ್ಲಿ ಅವರಷ್ಟು ದುರದೃಷ್ಟವಂತರೇ ಇಲ್ಲವೆಂದು ನನ್ನ ಭಾವನೆ.  ಸಡಗರದಲ್ಲಿ, ವೈಭವದ ನಡುವೆ ನಡೆದ ಅಕ್ಕನ ಮಗಳ ಮದುವೆಯನ್ನು ಕಂಪ್ಯೂಟರಿನಲ್ಲಿ ಸ್ಕ್ಯಾನ್ ಆಗಿ ಬಂದ ಚಿತ್ರಗಳ ಮೂಲಕ ಕಂಡು ಸಂಭ್ರಮಪಡುವ ನಮ್ಮ ನಿರಾಸೆ,ನಿಟ್ಟುಸಿರು ಯಾರಿಗೆ ಅರ್ಥವಾಗುತ್ತದೆ? ಅಪ್ಪ,ಅಮ್ಮನ ಶ್ರಾದ್ಧದ ದಿನ ಮನಸ್ಸನ್ನು ಸುತ್ತಿಕೊಳ್ಳುವ ಪಾಪಪ್ರಜ್ಞೆಯಿಂದ ಅಂದು ಊಟ ಬೇಕೆನ್ನಿಸುವುದಿಲ್ಲ. ಹಬ್ಬಹುಣ್ಣಿಮೆಗಳಲ್ಲಂತೂ ಮನಸ್ಸಿನ ಕತ್ತಲೆ ಕೊಠಡಿಗಳಲ್ಲಿ ನಡೆಯುವ ನೆನಪುಗಳ ದಾಂದಲೆಯನ್ನು ತಡೆದುಕೊಳ್ಳುವುದು ಇನ್ನೂ ಕಷ್ಟ.

ಹಣವೇ ಎಲ್ಲಾ ಅಂದುಕೊಂಡವರಿಗೂ ಹಣ ಎಲ್ಲವೂ ಅಲ್ಲ ಎಂಬ ಸತ್ಯ ದರ್ಶನವಾಗುವುದು ಇಲ್ಲೇ! ಹಾಗಿದ್ದರೂ ಅಲ್ಲೇಕಿದ್ದೀರಿ? ಅಮೆರಿಕಾ ಮೋಹ ಬಿಡಿಸಿಕೊಳ್ಳುವುದು ಕಷ್ಟ ಅಲ್ಲವೇ ಎಂದು ಹಂಗಿಸುವವರಿಗೆ ಉತ್ತರಿಸುವ ಉಸಾಬರಿ ನನಗೆ ಬೇಕಿಲ್ಲ. ಯಾಕೆಂದರೆ, ಅಲ್ಲಿಯ ಬವಣೆ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದು, ಇಲ್ಲಿಯ ಉಸುಕಿನಲ್ಲಿ ಒಮ್ಮೆ ಸಿಕ್ಕಿಕೊಂಡು ಬಿಡಿಸಿಕೊಳ್ಳಲು ಹೆಣಗುವವರ ಪಾಡು ಅವರಿಗೆ ಅರ್ಥವಾಗುವುದಿಲ್ಲ ಎಂದು ನನಗೆ ಗೊತ್ತಾಗಿದೆ.

ಇವತ್ತೂ ನನ್ನಲ್ಲಿ ಮತ್ತೆ ಅದೇ ಶೂನ್ಯ ಭಾವ. ಅಲ್ಲಿ , ನಮ್ಮೂರಿನಲ್ಲಿ ನುಡಿಹಬ್ಬದ ತೇರು ಹೊರಟಿದ್ದರೆ ಯಥಾಪ್ರಕಾರ ನಾನು ಇಲ್ಲೇ. ಉದಯ ವಾರ್ತೆಗಳಲ್ಲಿ ಸಮ್ಮೇಳನದ ಸಿದ್ಧತೆಗಳು, ಅತಿಥಿಗಳ ಉಪಚಾರಕ್ಕೆಂದು ಪೇರಿಸಿರಿಟ್ಟಿರುವ ಹೋಳಿಗೆಗಳು, ಕಣ್ಣು ತುಂಬುತ್ತವೆ. ಕುಮಾರಣ್ಣ ಚಂಪಾ ಮುಖದಲ್ಲಿ ನೀರಿಳಿಸಿದ್ದು,  ಯಾರೋ ಯಾವುದೋ ಕಾರಣಗಳಿಗೆ ಬರುವುದಿಲ್ಲವೆಂದಿದ್ದು, ಕುವೆಂಪು,ಕೆ.ವಿ,ಸುಬ್ಬಣ್ಣ ಚಿತ್ರಗಳೇ ಕಾಣೆಯಾಗಿರುವುದು….  ಸಮಾರಂಭಕ್ಕೆ ಹೋಗದಿದ್ದರೂ ಸುದ್ದಿಗಳಿಗಂತೂ ಬರವಿಲ್ಲ. ಉದಯ ಟಿವಿಯಲ್ಲಿ ನಿಸಾರ್ ಅಹಮದ್ ದಂಪತಿಯನ್ನು ಜೊತೆಯಲ್ಲಿ ಕಂಡು, ನಮ್ಮ ಮನೆಯ ಹತ್ತಿರವೇ ವಾಸಿಸುವ ಅವರ(ನಿಸಾರ್ ಅಹಮದ್) ಮಗಳ ನೆನಪಾಯಿತು. ನನ್ನಂತೆಯೇ ಅನಿವಾಸಿಯಾಗಿರುವ ಅವರು ಈ ಸಂಭ್ರಮವನ್ನು ಕೊನೆಪಕ್ಷ ಟಿವಿಯಲ್ಲಾದರೂ ನೋಡಿರುತ್ತಾರಾ? ಅನುಮಾನ.

ಇಂಗ್ಲಿಷ್ ಮಾತಾಡಲು ತಡವರಿಸುವ ಅಚ್ಚಕನ್ನಡಿಗ ಮುಖ್ಯಮಂತ್ರಿಗೆ ಕನ್ನಡ ಸಮ್ಮೇಳನಕ್ಕೆ ಆಹ್ವಾನವೇ ಹೋಗಿಲ್ಲವೆಂದರೆ ನಂಬುವುದೇ ಕಷ್ಟವಾಗುತ್ತದೆ. ಕನ್ನಡದ ಹಬ್ಬಕ್ಕೆ ಕರೆಯಬೇಕೇ? ಏಕೆ ? ಎಂಬ ವಾದಗಳೂ ಇವೆ.  ಅಣ್ಣನ ಮನೆಗೇ ಆದರೂ ಆಹ್ವಾನ ಬೇಕೆಂದು ಬಯಸುವ ನಾವು ನಾಡಿನ ಮುಖ್ಯಮಂತ್ರಿಯೊಬ್ಬ ಕರೆಯದಿದ್ದರೂ ಬರಲಿ ಎಂದು ನಿರೀಕ್ಷಿಸುವುದು ಸ್ವಲ್ಪ ದುಬಾರಿ ಆಸೆಯೇ ಅನ್ನಿಸಿತು.  ಈ ಸಂದರ್ಭವನ್ನೇ ನೆಪ ಮಾಡಿಕೊಂಡು ಕುಮಾರಸ್ವಾಮಿಯವರನ್ನು ಹಳಿಯುವವರಿಗೂ ಕಡಿಮೆ ಇಲ್ಲ.  ಬಾಯಿದ್ದವನು ಬರಗಾಲದಲ್ಲೂ ಬದುಕಿದ ಎಂಬಂತೆ, ಮಾತು ಬಲ್ಲವರಿಗೆ ತಮಗೆ ಬೇಕಾದಂತೆ ನಾಲಿಗೆ ಹೊರಳಿಸುವುದೂ ಗೊತ್ತಿರುತ್ತದೆ. 

ಯಾರದು ತಪ್ಪೋ? ಯಾರು ಒಪ್ಪೋ. ಒಟ್ಟಿನಲ್ಲಿ ಎಲ್ಲಾ ಕಡೆ ರಾಜಕೀಯ.  ನಮಗೆ ಅರ್ಥವಾಗದ ವಿಷಯ. ಈ ಬಗ್ಗೆ ತಲೆಕೆಡಿಸಿಕೊಳ್ಳುವುದೇಕೆ?.. ಬಿಡಿ.

ದೊಡ್ಡಣ್ಣನಿಗೆ ಕರೆ ಮಾಡಿದ್ದೆ. ಅಣ್ಣ ಸಮ್ಮೇಳನಕ್ಕೆ ಹೊರಟಿದ್ದ. ಅಣ್ಣಾ, ಅಲ್ಲಿಯ ಸಮ್ಮೇಳನದಲ್ಲಿ ಮಾರಾಟಕ್ಕಿರುವ ಪುಸ್ತಕಗಳಲ್ಲಿ ನನಗೂ ಕೆಲವು ತೆಗೆದುಕೋ ಎಂದೆ. ಸರಿ, ಯಾವ ಪುಸ್ತಕಗಳು ಬೇಕು? ಪಟ್ಟಿ ಕೊಡು ಅಂದ. ಅಂಗಡಿಯ ರಾಶಿ ಸೀರೆಗಳ ನಡುವೆ ಕುಳಿತು ನನ್ನ ಮೆಚ್ಚಿನ ಸೀರೆ ಆರಿಸುವ ಬದಲು, ಮನೆಯಲ್ಲಿಯೇ ಕುಳಿತು ಇಂತಹ ಬಣ್ಣದ, ಅಂಚಿನ ಸೀರೆ ಬೇಕೆಂದು ಕೇಳುವಂತಾಯಿತು ನನ್ನ ಸ್ಥಿತಿ. ಉತ್ತರಿಸುವುದು ಕಷ್ಟವಾದರೂ ಕೆಲವು ಹೆಸರುಗಳನ್ನು ಹೇಳಿದೆ. ಅಣ್ಣ ಗೊಣಗಿದ - ನಾನೇನೋ ಇಲ್ಲಿ ತಂದಿಡುತ್ತೇನೆ. ನೀನು ಬಂದು, ಇಲ್ಲಿಂದ ತೆಗೆದುಕೊಂಡು ಹೋಗುವುದು ಅದು ಯಾವ ಕಾಲಕ್ಕೋ?” ….. 

ಆಮೇಲೆ ಮಾತು ಬೇರೆ ಎಲ್ಲೆಲ್ಲೋ ಸಾಗಿತು.

ಕಲ್ಲರಳಿ ಹೂವಾಗಿ - ಕಲ್ಲರಳಿ

Posted on December 18th, 2006 in ಹಂಸ್, ಹಾಡು ಹಬ್ಬ by sritri

ಚಿತ್ರ - ಕಲ್ಲರಳಿ ಹೂವಾಗಿ (೨೦೦೬)
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ
ಗಾಯಕರು - ಹೇಮಂತ್ ಮತ್ತು ಸಂಗಡಿಗರು

ಹಾಡು ಕೇಳಿ

ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ
ಘಲ್ಲೆಂದಳು ಎದೆಯಲಿ ಪದವಾಗಿ ||ಪ||

ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ
ಝುಮ್ಮೆಂದಳು ಎದೆಯಲಿ ಪದವಾಗಿ||ಅನು||

ಈ ಕಾಡಿಗೆ ಕಣ್ಣೋಳ ಕಿರುಗೆಜ್ಜೆ ದನಿಯ
ಬೆನ್ನತ್ತಿದೆ ನನ್ನ ಪಂಚೇರು ಜೀವ
ಆ ದಿಬ್ಬ ಈ ದಿಬ್ಬ ಸುತ್ತೋಳ ಸಂಗ
ಜೀಕಾಡಿದೆ ನನ್ನ ಅರೆಪಾವು ಗುಂಡಿಗೆ

ನಿನಗೊಂದು ಕೋಟೆ
ಕಟ್ಟುವೆನು ನಾನು
ರಾಣಿಯಾಗಿ ನನ್ನ
ಪಾಲಿಸುವಿಯೇನು?
ನಿನಗೆ ನನ್ನೆದೆಯೆ ಅಂತ:ಪುರ ||೧||

ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕಾಗಿ
ಅಚ್ಚಾದಳು ಎದೆಯಲಿ ಪದವಾಗಿ||

ಹೊಂದೇರ ಮೇಲೇರಿ ದುರ್ಗಾದ ಸೂರ್ಯ
ಮುಚ್ಚಿಟ್ಟ ರತ್ನಾನ ತೋರಿತ್ತ ನನಗೆ
ಈ ರತ್ನಕ್ಕೆ ಚಿನ್ನದ ಕುಂದಣವಾಗೆ
ತರಾಸು ತಟ್ಟೇಲಿ ನನ್ನಿಟ್ಟ ಕೊನೆಗೆ

ನಿನ್ನ ನೆನೆದೆನಗೆ
ಬಿಸಿಲಲ್ಲೂ ಕನಸೆ
ನೀನು ಬಳುಕಾಡಿ
ತೂಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆನಾ ||೨||

ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಮಾನಸ ದೇಸಿ ವಧುವಾಗಿ
ಒಂದಾದಳು ಎದೆಯಲಿ ಪದವಾಗಿ ||ಪ||

**    **    **     **     **

Next Page »