ಜ್ವರ..ಒಂಥರ ಜ್ವರ..
ಜ್ವರ, ನೆಗಡಿಯ ಕೆಟ್ಟ ಪರಿಣಾಮಗಳು ಎಲ್ಲರಿಗೂ ತಿಳಿದೇ ಇರುತ್ತವೆ. ಆದರೆ ನೀವು ಕೆಟ್ಟದರಲ್ಲಿಯೂ ಒಳ್ಳೆಯದನ್ನೇ ಹುಡುಕುವ ಆಶಾವಾದಿಯಾಗಿದ್ದರೆ, ಜ್ವರದಲ್ಲೂ ಕೆಲವು ಪ್ರಯೋಜನಗಳನ್ನು ಕಾಣಬಹುದು. ಕಳೆದೆರಡು-ಮೂರು ದಿನಗಳು ಜ್ವರದ ಕುಲುಮೆಯಲ್ಲಿ ಬೇಯುತ್ತಿದ್ದಾಗ, ಮನಸ್ಸಿನಲ್ಲಿಯೇ ನಾನು ಜ್ವರದ ಪಾಸಿಟಿವ್ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೆ. ಮರೆಯುವ ಮುನ್ನ, ನೆನಪಿರುವುದನ್ನು ಬರಹಕ್ಕಿಳಿಸಿ ಬಿಡುತ್ತೇನೆ. ನಿಮ್ಮ ಅನುಭವಕ್ಕೆ ಬಂದಿರುವ ಸಂಗತಿಗಳೇನಾದರೂ ಇದ್ದರೆ ಈಗಲೇ ತಿಳಿಸಿ. ಜ್ವರ ಬರುವ ತನಕ ಕಾಯಬೇಡಿ!
* ಹಾಡ ಹಗಲೇ ಮೈತುಂಬಾ ಹೊದ್ದು ಮಲಗಿದಾಗ ಪಾಪಪ್ರಜ್ಞೆ ಕಾಡುವುದಿಲ್ಲ. ಜ್ವರ ಬಂದಿರುವುದರಿಂದ ಮಲಗುವುದು ನಿನ್ನ ಹಕ್ಕು ಎಂದು ಮನಸ್ಸು ದೇಹದ ನೆರವಿಗೆ ನಿಲ್ಲುತ್ತದೆ.
* ಕೆಮ್ಮಿನ ಸಿರಪ್ಪುಗಳಿಗೆ ಆಲ್ಕೋಹಾಲ್ ಬೆರೆಸುವುದೇಕೆ? ನನಗಂತೂ ಅದನ್ನು ಕುಡಿದರೆ ಇನ್ನಿಲ್ಲದ ನಿದ್ದೆ ಆವರಿಸುತ್ತದೆ. ಗುಂಡಿನ ರುಚಿ ಅರಿಯದ ಪಾಪದ ಪ್ರಜೆಗಳಿಗೆ ಗುಂಡಿನ ಗಮ್ಮತ್ತನ್ನು ತಿಳಿಸಿ ಕೊಡಲೆಂದೇ ಔಷಧಿಗಳಿಗೆ ಆಲ್ಕೋಹಾಲ್ ಬೆರೆಸುತ್ತಾರೆ!
* ದೂರವಾಣಿ ಕರೆಗಳನ್ನು ಅಟೆಂಡ್ ಮಾಡದಿರಲು ಸಕಾರಣ.
* ಜ್ವರ ಹಿಡಿದ ಬಾಯಿಗೆ ಹಿತವಾಗುವಂತೆ, ನನ್ನವರು ಮಾಡಿ ಬಡಿಸುವ ಗೊಡ್ಡು ಸಾರು. ಈ ಸಾ(ನೀ)ರನ್ನು ಸೂಕ್ಷ್ಮದರ್ಶಕದಡಿಯಲ್ಲಿ ಹಿಡಿದು ನೋಡಿದರೂ ಅದರಲ್ಲಿ ಏನೂ ಕಾಣಿಸದು!
* ಒಮ್ಮೆ ಜ್ವರ ಬಂದು ಹೋದರೆ ದೇಹದ ರಕ್ಷಣಾ ಸೈನಿಕರು ಶಸ್ತ್ರ ಸನ್ನದ್ಧರಾಗಿ ನಿಲ್ಲುವುದರಿಂದ, ಹೋದ ಜ್ವರ ಸ್ವಲ್ಪ ಕಾಲವಂತೂ ಹಿಂತಿರುಗಿ ಬರುವುದಿಲ್ಲವೆಂಬ ಭರವಸೆ.
* ಇದು ಜ್ವರದ ಕೊನೆಯ ಮತ್ತು ಅತ್ಯಂತ ಒಳ್ಳೆಯ ಪರಿಣಾಮ. ಡಯಟ್, ವ್ಯಾಯಾಮಗಳ ನೆರವಿಲ್ಲದೆಯೇ ದೇಹದ ತೂಕ ಜರ್ರನೆ ಇಳಿದು ಹೋಗಿರುತ್ತದೆ..