ಭಾಗ-7

Posted on September 27th, 2007 in ಹೊಸಕಥೆ, ಕಟ್ಟು ಕಥೆ by sritri

ಕಾಂತಿ ಕೋಪದಿಂದ ಧುಮುಗುಟ್ಟುತ್ತಾ ರೂಮಿಗೆ ಬಂದಾಗ ಪ್ರವಲ್ಲಿಕಾ ಅಕ್ಕ ಧಾರಿಣಿಗೆ ತಾನು ಭರತಖಾನನ ಬಂಧನದಿಂದ ತಪ್ಪಿಸಿಕೊಂಡು ಬಂದ ಕಥೆಯನ್ನು ಬಣ್ಣಬಣ್ಣವಾಗಿ ಹೇಳಿ ಮುಗಿಸುತ್ತಿದ್ದಳು.
ಧಾರಿಣಿ ಇವರುಗಳ ರೂಮಿನಲ್ಲೇ `ಗೆಸ್ಟ್’ಎಂದು ಇರುವುದಾದ್ದರಿಂದ ಧಾರಿಣಿಗೂ ಕಾಂತಿಗೂ ಕೆಲವೇ ಸಮಯದಲ್ಲಿ ಚೆನ್ನಾದ ಸ್ನೇಹ ಬೆಳೆದಿತ್ತು…ಕಾಂತಿ ಪ್ರವಲ್ಲಿಕಾ ತರ `ಪುಕ್ಕಲು ಪಾರ್ಟಿ’ಅಲ್ಲ ಧಾರಿಣಿಯಷ್ಟಲ್ಲದಿದ್ದರೂ ತಕ್ಕಷ್ಟು ಧೈರ್ಯವಂತೆ ಜೊತೆಗೆ ಅನ್ಯಾಯ ಕಂಡರೆ ಸಿಡಿದು ಬೀಳುವ ಸ್ವಭಾವದವಳು ಸ್ವಲ್ಪ ಮಾತಾಳಿ ಕೂಡಾ…ಈ ಎಲ್ಲಾ ಗುಣಗಳು ಧಾರಿಣಿಯಲ್ಲೂ ಇದ್ದುದರಿಂದ ಅವಳಿಗೆ ಕಾಂತಿಯೊಂದಿಗೆ ಸ್ನೇಹ ಸಲಿಗೆ ಚಿಗುರಿತ್ತು. ಈ ಸಲಿಗೆಯಿಂದಲೇ ಧಾರಿಣಿ ನಗುತ್ತಾ `ಏನು ಅಮ್ಮಾವ್ರೂ…ಗರಂ ಗರಂ ಆಗಿದೀರಾ…ಇವತ್ತೂ? ಎಂದಳು.

ಅದಕ್ಕುತ್ತರವಾಗಿ ದೊಪ್ಪೆಂದು ಮಂಚದ ಮೇಲೆ ಕೂರುತ್ತಾ ಕಾಂತಿ ಕೋಪದ ದನಿಯಲ್ಲಿ ಹೇಳಿದಳು`ನೀವಿಬ್ರೂ ಯಾವ್ದೋ ಕಾಲದ ಆ ರೌಡಿ ಕಥೆನೇ ಮೆಲಕು ಹಾಕ್ತಾ ಕೂತಿರಿ. ಈ ವಲ್ಲೀನೋ ಇವಳ ಪುಕ್ಕಲುತನನೋ ದೇವರಿಗೇ ಪ್ರೀತಿ ಬಾರೇ… ಮತ್ತೆ ಪೋಲೀಸ್ ಸ್ಟೇಷನ್ ಗೆ ಹೋಗಿ ಆ ಕೇಡಿಗಳು ನಿನ್ ಹಿಡ್ಕೊಂಡು ಹೋಗಿದ್ರೂ ಅಂತ ಅವ್ನ ಬಗ್ಗೆ ಡೀಟೇಲ್ಸ್ ಕೊಟ್ಟು ಬರಣಾ ಅಂದ್ರೆ ಅಯ್ಯಯ್ಯೋ ಒಂದ್ ಸಲ ಪೋಲೀಸ್ ಹತ್ರ ಹೋಗಿದ್ದಕ್ಕೇ ಹೀಗೆಲ್ಲಾ ಆಯ್ತಪ್ಪಾ ಮತ್ತೆ ಆ ಸಾವಾಸಾನೇ ಬೇಡಾ ಅಂದ್ಬುಟ್ಳು ಪೋಲೀಸೇ ಹಾಸ್ಟೆಲ್ ಗೆ ಹುಡ್ಕಿಕೊಂಡು ಬಂದಾಗ ಅವಳಿಲ್ಲಾ ಅಂತ ಹೇಳಿಸ್ ಬಿಟ್ಳು… ಈಗ ನೋಡಿದ್ರೆ… ಕಂಡ್ ಕಂಡೋರ್ ಹತ್ರ ಹಳೇ ಕಥೆ ಕೊಚ್ಕೋತಿದಾಳೇ…ಅಮ್ಮ ಮಹಾರಾಣೀ… ಪ್ರವಲ್ಲಿಕಾ ದೇವೀ… ಹಳೆ ಕತೆ ಕೊಚ್ಕೊಳೋದು ಬಿಟ್ಟು ಗಂಟು ಮೂಟೆ ಕಟ್ಟಿ ತಯಾರಾಗೂ… ಬೆಂಗಳೂರಿಂದ ಆಚೆ ಯಾವುದೋ ತಿಪ್ಪೇಗುಂಡೀಲಿ ನಿನ್ ಹೊಸ ಅರಮನೆ ತಯಾರಾಗಿದೆ. ಅಲ್ಲಿಗೆ ದಯಮಾಡಿಸಿ ನಿನ್ನ ಪಾದಧೂಳಿಯಿಂದ ಪುನೀತ ಮಾಡು…’ಎಂದು ಕೂಗಿದಳು. ಪ್ರವಲ್ಲಿಕಾ ಅಳು ಮೂತಿ ಮಾಡಿ ಕೂತಾಗ ಧಾರಿಣಿ ಇನ್ನು ಕೆಲಸ ಕೆಟ್ಟೀತೆಂದು ಕಾಂತಿಯನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾ` ಯಾಕೆ ಕಾಂತಿ ಏನಾಯ್ತು ನಿಂಗೆ… ಏನ್ ಸಮಾಚಾರ ಹೇಳು…’ಎಂದಳು ಕಾಂತಿ ಬುಸುಗುಟ್ಟುತ್ತಾ ತಾನು ಈಗ ತಾನೇ ಹಾಸ್ಟೆಲ್ ನೋಟೀಸ್ ಬೋರ್ಡ್ ನಲ್ಲಿ ನೋಡಿದ ಸಂಗತಿ ಹೇಳಿದಾಗ ಪ್ರವಲ್ಲಿಕಾ ಅಳಲು ಶುರು ಮಾಡಿಬಿಟ್ಟರೆ ಧಾರಿಣಿ ಚಿಂತಿತಳಾದಳು.

ಅಂದು ಕೆ.ಡಿ ಶಿವಣ್ಣನ ಕೈವಾಡದಿಂದಾಗಿ ಹಾಸ್ಟೆಲ್ ನಲ್ಲಿ ಒಂದು ಸರ್ಕಾರಿ ಆದೇಶವನ್ನು ಪ್ರಕಟಿಸಲಾಗಿತ್ತು ಹಾಸ್ಟೆಲ್ ಕಟ್ಟಡ ಸುಮಾರು ನಲವತ್ತು ವರ್ಷದಷ್ಟು ಹಳೆಯದಾದ್ದರಿಂದ ಸರ್ಕಾರ ಅದನ್ನು ಕೆಡವಿ ಹೊಸ ಕಟ್ಟಡ ಕಟ್ಟಿಸಲು ತೀರ್ಮಾನಿಸಿದೆಯೆಂದೂ ಆದ ಕಾರಣ ಹಾಸ್ಟೆಲ್ ನಿವಾಸಿಗಳೆಲ್ಲಾ ತಮ್ಮ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಬೆಂಗಳೂರಿನ ಹೊರವಲಯದಲ್ಲಿರುವ ತಾತ್ಕಾಲಿಕ ಕಟ್ಟಡವೊಂದಕ್ಕೆ ಹೊರಡಲು ಒಂದು ವಾರದೊಳಗಾಗಿ ತಯಾರಾಗಬೇಕೆಂದು ಆಜ್ಞಾಪಿಸಲಾಗಿದೆ ಎಂದೂ ನೋಟೀಸಿನಲ್ಲಿ ತಿಳಿಸಲಾಗಿತ್ತು. ತನ್ನ ಸೂಚನೆ ಪ್ರಕಾರ ಹಾಸ್ಟೆಲ್ ನಲ್ಲಿ ನೋಟೀಸು ಜಾರಿಯಾಗಿದ್ದು ತಿಳಿದು ಕೆ.ಡಿ ಶಿವಣ್ಣನಿಗೆ ತೃಪ್ತಿ ಯಾಯಿತು. ಹಾಸ್ಟೆಲ್ ಹುಡುಗಿಯರಿಗಾಗಿ ಅವನು ಸೂಚಿಸಿದ್ದ ಬೆಂಗಳೂರು ಹೊರವಲಯದ ಕಟ್ಟಡ ಒಂದು ಸರ್ಕಾರಿ ಗೋಡೋನ್.ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ್ದು. ಇನ್ನು ಸರಳಾದೇವಿಯನ್ನೂ,ಕೊಳಚೆ ನಿರ್ಮೂಲನಾ ಇಲಾಖೆಯ ಅಧೀಕ್ಷಕರನ್ನೂ ಸುಮ್ಮನಾಗಿಸುವ ಕೆಲಸ ಉಳಿಯಿತು ಅಂದುಕೊಂಡ.ಅಧೀಕ್ಷಕರ ಕಥೆ ಪರವಾಗಿಲ್ಲ ಆವಮ್ಮನದೇ ಪ್ರಾಬ್ಲಮ್ಮು ಸೀಎಮ್ಮಿಗೆ ಕ್ಲೋಸು ಬೇರೆ ಅವ್ಳು ಹುಸಾರಾಗಿ ಮುಂದೆ ಹೆಜ್ಜೆ ಇಡಬೇಕು. ಇನ್ಯಾರ ಕಡೆಯಿಂದನೂ ತೊಂದ್ರೆ ಇಲ್ಲ’ಅಂತ ತನಗೆ ತಾನೇ ಹೇಳಿಕೊಂಡ ಕೆ.ಡಿ ಶಿವಣ್ಣ. ಅದೇ ಅವನು ಮಾಡಿದ ತಪ್ಪು.

ಏಕೆಂದರೆ ಅದೇ ಸಮಯಕ್ಕೆ ಪ್ರವಲ್ಲಿಕಾಳ ರೂಮಿನಲ್ಲಿ ಕೋಪತಪ್ತ ಹುಡುಗಿಯರ ಗುಂಪು ಮುಂದೇನು ಮಾಡಬೇಕೆಂದು ಕಾಂತಿ ಮತ್ತು ಧಾರಿಣಿಯ ನೇತೃತ್ವದಲ್ಲಿ ಚರ್ಚಿಸುತ್ತಿತ್ತು. ಧಾರಿಣಿ ತಾನು ಹಾಸ್ಟೆಲ್ ನ ಗೆಸ್ಟ್ ಮಾತ್ರವಾಗಿರುವುದರಿಂದ ಮತ್ತು ಕೇವಲ ಮಾರ್ಗದರ್ಶನ ಮಾಡುತ್ತೀನೆಂದೂ ಪ್ರತಿಭಟನೆಯ ಮುಂದಾಳತ್ವ ಯಾವುದಾದರೂ ಹುಡುಗಿ ವಹಿಸಿಕೊಳ್ಳಬೇಕೆಂದೂ ಹೇಳಿದಾಗ ಕಾಂತಿ ಮುಂದಾಗಿ ತಾನೇ ನಾಳೆ ತಾವು ಮಾಡಬೇಕೆಂದಿರುವ ಪ್ರತಿಭಟನಾ ಮೋರ್ಚಾದ ಮುಂದಾಳುವಾದಳು. ಧಾರಿಣಿ ವಿದ್ಯಾರ್ಥಿನಿ ಅಲ್ಲ ಕೇವಲ ಗೆಸ್ಟ್ ಸೋ ಹಾಗೆಲ್ಲ ಪ್ರೊಟೆಸ್ಟ್ ಮಾಡುವಂತಿಲ್ಲ ಜೊತೆಗೆ ಅವಳು ಯಾರಿಗೂ ಹೇಳದೇ ಇರುವ ಒಂದು ರಹಸ್ಯ ಅವಳನ್ನು ಈ ಮೋರ್ಚಾದಿಂದ ವಿಮುಖಳಾಗಿಸಿತ್ತು. ಅದು ಅವಳು ಗುಟ್ಟಾಗಿ ತನ್ನ ಪೇಟೇಂಟ್ ಫೈಲ್ ಮಾಡಲು ಡಾಕ್ಯುಮೆಂಟ್ ಅನ್ನು ತಯಾರು ಮಾಡಿ ಬೆಂಗಳೂರಿನಿಂದಲೇ ಅಮೇರಿಕಾದ ಪೇಟೆಂಟ್ ಕಛೇರಿಯಲ್ಲಿ ಸಬ್ಮಿಟ್ ಮಾಡುವ ಅವಳ ಪ್ಲ್ಯಾನ್.

ಪ್ರವಲ್ಲಿಕಾ ಎಂಬ ಬಿಳಿ ಪಾರಿವಾಳ ತನ್ನ ಬಲೆಯಿಂದ ತಪ್ಪಿಸಿಕೊಡು ಹೋಯಿತೆಂದು ತಿಳಿದಾಗ ಭರತಖಾನನ ಕೋಪ ಮೇರೆ ಮೀರಿತ್ತು.ಒಂದಿಬ್ಬರು ಸಹಚರರಿಗೆ ತನ್ನ ಕೋಪದ ರುಚಿ ತೋರಿಸಿದ್ದ ಈ ಬಾರಿ ಪ್ರವಲ್ಲಿಕಾಳನ್ನು ಹಿಡಿತಂದು ಎಲ್ಲಿಯಾದರೂ ಸಾಗಿಸಿಬಿಡಬೇಕೆಂದು ಯೋಚಿಸಿದ ಅದರಂತೆ ಪ್ರವಲ್ಲಿಕಾ ಹಾಸ್ಟೆಲ್ ಮುಂದೆಯೇ ಒಂದೆರಡು ದಿನ ವಾಚ್ ಮಾಡಬೇಕೆಂದು ನಂಬಿಕೆಯ ನಾಲ್ವರು ಧಡಿಯರಿಗೆ ಸೂಚನೆಕೊಟ್ಟು ಹೊರನಡೆದ ಭರತ ಖಾನ.

ಧಾರಿಣಿಯ ಸೂಚನೆ ಪ್ರಕಾರ ಮರುದಿನ ಹುಡುಗಿಯರು ಕಾಂತಿಯ ನೇತೃತ್ವದಲ್ಲಿ ಘೋಷಣೆ ಕೂಗುತ್ತಾ ವಿದಾನ ಸೌಧದವರೆಗೂ ಮೋರ್ಚಾ ಹೋಗಿ ಮಹಿಳಾ ಕಲ್ಯಾಣ ಮಂತ್ರಿ ಸರಳಾದೇವಿಗೆ ತಮ್ಮ ಮನವಿ ಪತ್ರ ಅರ್ಪಿಸಿದರು.ವಿದ್ಯಾರ್ಥಿನಿಯರ ಪರೀಕ್ಷೆಗಳು ಹತ್ತಿರದಲ್ಲೇ ಇರುವುದರಿಂದ ತಮ್ಮ ಅಭ್ಯಾಸದ ಮೇಲೆ ಈ ವರ್ಗಾವಣೆ ಕೆಟ್ಟ ಪರಿಣಾಮ ಬೀರುವುದೆಂದೂ ಮತ್ತು ಕಟ್ಟಡ ಬಹಳ ಗಟ್ಟು ಮುಟ್ಟಾಗಿರುವುದರಿಂದ ಸರ್ಕಾರ ಈ ನಿರ್ಧಾರ ಕೈ ಬಿಡ ಬೇಕೆಂದೂ ಅದರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಕಾಂತಿ ಮಂತ್ರಿಗಳ ಚೇಂಬರ್ ಒಳಗೆ ತನ್ನೊಂದಿಗೆ ಬಲವಂತವಾಗಿ ಪ್ರವಲ್ಲಿಕಾಳನ್ನು ಎಳೆದುಕೊಂಡು ಹೋದಳು ಮರುದಿನದ ಎಲ್ಲಾ ಪ್ರಮುಖ ವಾರ್ತಾ ಪತ್ರಿಕೆಗಳಲ್ಲಿ ಸರಳಾ ದೇವಿಯವರಿಗೆ ಮನವಿಪತ್ರ ಅರ್ಪಿಸುತ್ತಿರುವ ಕಾಂತಿಯ ಪಕ್ಕದಲ್ಲಿ ಪ್ರವಲ್ಲಿಕಾ ಇರುವ ಚಿತ್ರಗಳು ಅಚ್ಚಾಗಿದ್ದವು.
ನಮಗೆ ಎಷ್ಟು ಪ್ರಚಾರ ಸಿಕ್ಕಿದರೆ ಅಷ್ಟು ಒಳ್ಳೆಯದು ಎಂದು ಮರುದಿನದ ಪತ್ರಿಕೆ ನೋಡಿ ತೃಪ್ತಿಯಿಂದ ನುಡಿದಳು ಧಾರಿಣಿ ಪಾಪ… ಅವಳಿಗೆ ಈ ಪ್ರಚಾರದಿಂದಾಗುವ ಅಪಾಯದ ಅರಿವಿಲ್ಲ!

***
‘ಯಾವಳವಳು ಕಾಂತೀ…ಹಿಡ್ಕೊಂಡ್ ಬರ್ರಲಾ ನಾಕು ಒದ್ರೆ ನೆಟ್ ಗಾಗ್ ತಾಳೇ’ .ಕೆ.ಡಿ
ಶಿವಣ್ಣ ಅಬ್ಬರಿಸಿದ.ಲೋಕಲ್ ಟಿ.ವಿ ಚಾನಲ್ ಒಂದು ಹಾಸ್ಟೆಲ್ ಗೆ ಹೋಗಿ ಹುಡುಗಿಯರ ಸಂದರ್ಶನ ಬೇರೆ ಮಾಡಿತ್ತು.ಬಾಯಿ ಬಡುಕಿ ಕಾಂತಿ ಟಿ.ವಿಯಲ್ಲಿ ಹಾವ ಭಾವಗಳೊಂದಿಗೆ ಮಾತಾಡಿದ್ದು,ಸರಳಾದೇವಿ ಮುಖ್ಯ ಮಂತ್ರಿಗಳು ಇದರ ಬಗ್ಗೆ ವಿಚಾರಿಸುರೆಂದು ಹೇಳಿದ್ದು ಕೇಳಿ ರಾಜಯ್ಯ ಕಿಡಿ ಕಿಡಿಯಾದ್ದ ನೇರವಾಗಿ ಪೋನ್ ಎತ್ತಿ ಶಿವಣ್ಣನನ್ನು ಜಾಡಿಸಿದ…ರಾಜಯ್ಯನಿಗೆ ಸಿಟ್ಟು ಬಂದರೆ ಅವನೆಷ್ಟು ಕ್ರೂರಿ ಆಗಬಲ್ಲನೆಂದುಕೆ.ಡಿ. ಶಿವಣ್ಣನಿಗೆ ಚೆನ್ನಾಗಿ ಗೊತ್ತು. ಇನ್ನು ಸರಳಾದೇವಿ ಮುಖ್ಯ ಮಂತ್ರಿ ವರೆಗೆ ವಿಶಯ ತೆಗೆದುಕೊಂಡು ಹೋಗಲು ಬಿಟ್ಟರೆ ರಾಜಯ್ಯ ತನ್ನ ಪ್ರಾಣ ಉಳಿಸುವುದಿಲ್ಲವೆಂದೂ ಅವನಿಗೆ ಗೊತ್ತು. ತನ್ನ ಬಂಟರನ್ನು ಕಾಂತಿಯ ಹಾಸ್ಟೇಲ್ ಕಡೆಗೆ ಅವಸರವಾಗಿ ಅಟ್ಟಿದ. ಪ್ರವಲ್ಲಿಕಾಳಿಗಾಗಿ ಹಾಸ್ಟೆಲ್ ಮುಂದೆ ಟಳಾಯಿಸುತ್ತಿದ್ದ ಭರತ ಖಾನನ ಬಂಟರಾದ ಹುಸೇನಿ,ಫರೂಕ್,ಮತ್ತು ಇನಾಯತ್‍ಗೂ ಕೆ.ಡಿ ಶಿವಣ್ಣ ನ ಬಂಟರಾದ ಮಂಜ,ಸೂರಿ ಗೂ ಆಗಲಿರುವ ಸಣ್ಣ ಘರ್ಷಣೆ ಯಾರ್ಯಾರ ಹಣೆ ಬರಹ ಬದಲಿಸಲಿದೆಯೋ ಯಾರಿಗೆ ಗೊತ್ತು???
***

ಮಾರನೇ ದಿನ ಟಿವಿಯಲ್ಲಿ ಬಿಸಿ ಬಿಸಿ ಸುದ್ದಿ. ನಗರಾಭಿವೃದ್ದಿ ಮಂತ್ರಿ ಕೆ.ಡಿ. ಶಿವಣ್ಣ ನ ಮನೆಯಲ್ಲಿ ಬಾಂಬ್ ಸ್ಪೋಟಿಸಿ ಅವರ ಮನೆಯ ಮುಂದಿನ ಗಾರ್ಡ್ ಒಬ್ಬ ಮತ್ತು ಶಿವಣ್ಣನ ಮಗಳ ಪ್ರೀತಿಯ ನಾಯಿ `ಚುಪ್ಪಿ` ಮೃತ ಪಟ್ತಿದ್ದರು ಕೆ.ಡಿ. ಶಿವಣ್ಣ ಟಿವಿಯಲ್ಲಿ ಕಣ್ಣೀರಿಡುತ್ತಾ ತನ್ನ ಮಗಳೊಂದಿಗೆ ಕಾಣಿಸಿಕೊಂಡ ತನ್ನಂಥ ಸಜ್ಜನ ಎಂಥಾ ಪ್ರಾಣಾಪಾಯ ಎದುರಿಸಬೇಕಾಗಿ ಬಂದಿದೆ ಎಂದು ಹಲುಬಿದ ಚುಪ್ಪಿಯ ಫೋಟೊಗಳು ಎಲ್ಲಾ ಪತ್ರಿಕೆಯ ಮೊದಲ ಪುಟದಲ್ಲಿ ಬಂದವು ಸತ್ತ ಗಾರ್ಡ್‍ ಬಗ್ಗೆ ಮೂಲೆಯಲ್ಲಿ ಸಣ್ಣದಾಗಿ ವರದಿ ಮಾಡಲಾಗಿತ್ತು.

ಬಾಂಬ್ ಸ್ಪೋಟದ ಕಾರಣ ಶಿವಣ್ಣನಿಗೆ ಗೊತ್ತಿಲ್ಲದೇ ಏನಿಲ್ಲ.ಅದಾಗಿದ್ದು ಹೀಗೆ. ಮಂಜ ಮತ್ತು ಸೂರಿ ಪ್ರವಲ್ಲಿಕಾಳ ಹಾಸ್ಟೆಲ್ ಮುಂದೆ ಕಾಂತಿಯನ್ನು ಎಳೆದೊಯ್ಯ ಬೇಕೆಂದು ಹೊಂಚು ಹಾಕುತ್ತಿದ್ದರು.ಮೆಲ್ಲಗೆ ಹಾಸ್ಟೆಲ್ ಕಾಂಪೋಂಡ್ ಧುಮುಕಿ ಕಾಂತಿಯ ರೂಮ್ ನಲ್ಲಿ ಕಿಟಕೆ ಮೂಲಕ ಇಣುಕಿ ಸಹ ನೋಡಿದರು ಆದರೆ ರೂಮಿನಲ್ಲಿ ಪ್ರವಲ್ಲಿಕಾ ಸಹ ಇದ್ದಳು. ಧಾರಿಣಿ ಪಕ್ಕದ ರೂಮಿನಲ್ಲಿ ಹುಡುಗಿಯರೊಂದಿಗೆ ಮಾತಾಡುತ್ತಾ ಕೂತಿದ್ದರಿಂದ ಅವಳು ಮಂಜ ಮತ್ತು ಸೂರಿಯ ದೃಷ್ಟಿಯಿಂದ ಬಚಾವಾಗಿದ್ದಳು ತಾವು ಕಾಂತಿಯನ್ನು ಎಳೆದೊಯ್ಯುವುದಕ್ಕೆ ಪ್ರವಲ್ಲಿಕಾ ಸಾಕ್ಷಿಯಾಗಿ ಇರುವ ಅಪಾಯ
ಮನಗಂಡು ಸಲ್ಪ ಹೊತ್ತು ಕಾಯೋಣವೆಂದುಕೊಂಡು ಹೊರಬಂದುಬಿಟ್ಟರು. ಹಾಸ್ಟೆಲ್ ಎದುರಿನ ಛೋಟಾಚಾಯ್ ಅಂಗಡಿಯಲ್ಲಿ ಒಂದು ಗ್ಲಾಸ್ ಟೀ ಕುಡಿಯೋಣವೆಂದು ಅಲ್ಲಿಗೆ ಬಂದರು
ಕಾಂತಿ `ಪ್ರವಲ್ಲಿಕಾ…’ ಎಂದು ಕೂಗುವುದನ್ನು ಕೇಳಿಸಿಕೊಂಡಿದ್ದ ಮಂಜನಿಗೆ ಆ ಹೆಸರು ಬಲು ಇಷ್ಟವಾಗಿಬಿಟ್ಟಿತ್ತು ತನ್ನ ತಂಗಿ ಕಳೆದ ತಿಂಗಳು ಹೆತ್ತ ಹೆಣ್ಣು ಮಗುವಿಗೆ ಈ ಹೆಸರು ಒಪ್ಪುತ್ತದೆನ್ನಿಸಿತು ಆದರೆ ಆ ಹೆಸರು ಹೇಳಲು ಅವನ ನಾಲಿಗೆ ತಿರುಗುತ್ತಿಲ್ಲ!ಟೀ ಅಂಗಡಿಯಲ್ಲಿ ಕುಳಿತು ಎರಡು ಸ್ಟ್ರಾಂಗ್ ಟೀ ಆರ್ಡರ್ ಮಾಡಿಬೀಡಿ ಹಚ್ಚಿಕೊಂಡು`ಏನ್ಲಾ ಸೂರಿ…ಆ ಹೆಸ್ರು…’ ಅಂತ ಕೇಳಿ ಪ್ರವಲ್ಲಿಕಾ ಹೆಸರನ್ನು ಬಾಯಿ ಪಾಠ ಮಾಡಿಕೊಳ್ಳಲಾರಂಭಿಸಿದ.ಇದ್ದಕ್ಕಿದ್ದಂತೆ ಸೂರಿಗೆ ತಾವು ಪ್ರವಲ್ಲಿಕಾಳನ್ನೂ ಏಕೆ ಒಯ್ಯಬಾರದೆಂಬ ಯೋಚನೆ ಬಂದು ಬಿಟ್ಟಿತು`ಎಂಗೂ ಹುಡ್ಗಿ ಚೆಂದಾಗವ್ಳೆ…’ಎಂದು ಜೊಲ್ಲು ಸುರಿಸುತ್ತಾ ಮಂಜನಿಗೆ ತನ್ನ ಆಲೋಚನೆ ಹೇಳಿದ ಬಡಪಟ್ಟಿಗೆ ಮಂಜ ಒಪ್ಪಲ್ಲಿಲ್ಲ ಧಣಿಗಳ ತಾವ ಕೇಳಣ ಅಂದ ಇಬ್ಬರಿಗೂ ಜಗಳ ಸುರುವಾಯಿತು ಕೆ.ಡಿ. ಶಿವಣ್ಣನಿಗೆ ಮೊಬೈಲ್ ನಲ್ಲಿ ಕೇಳಿದ್ದೂ, ಅವನು ಪ್ರವಲ್ಲಿಕಾ ಳನ್ನೂ ಏಳೆತರಲು ಗ್ರೀನ್ ಸಿಗ್ನಲ್ ಕೊಟ್ಟಿದ್ದೂ ಆಯಿತು. ಅದೇ ಟೀ ಅಂಗಡಿಯಲ್ಲಿ ಕೂತು ಪ್ರವಲ್ಲಿಕಾಳಿಗಾಗಿ ಹಾಸ್ಟೆಲ್ ಮುಂದೆ ಕಾಯುತ್ತಿದ್ದ ಭರತ ಖಾನನ ಬಂಟರಾದ ಹುಸೇನಿ,ಫರೂಕ್,ಮತ್ತು ಇನಾಯತ್ ಗೂ ಇವರಿಬ್ಬರ ಮಾತುಗಳು ಅಯಾಚಿತವಾಗಿ ಕೇಳಿಬಂದವು! ಹುಸೇನಿ ಸ್ವಲ್ಪ ಮುಂಗೋಪಿ ನಮ್ಮ ಖಾನನ `ಹಕ್ಕಿ’ಯನ್ನು ಪಟಾಯಸಲು ಬಂದವರಿಗೆ ಬುದ್ದಿಕಲಿಸ ಬೇಕೆಂದು ಮಂಜನಿಗೂ ಸೂರಿಗೂ ಸರಿಯಾಗಿ ನಾಲ್ಕು ತದುಕಿದ. ಅಷ್ಟಕ್ಕೇ ಬಿಡದೆ ಭರತ ಖಾನನಿಗೆ ಪೋನ್ ಮಾಡಿ ಎಲ್ಲಾ ವಿಶಯ ತಿಳಿಸಿ ಬಿಟ್ಟ.

ಭರತ ಖಾನ ತಾವು ಕಾರ್ ಬಾಂಬ್ ಇಟ್ಟಿದ್ದನ್ನು ಪ್ರವಲ್ಲಿಕಾ ನೋಡಿದಳು ಎಂಬ ಕಾರಣಕ್ಕಾಗೇ ಈ ಮೊದಲು ಅವಳನ್ನು ಕಿಡ್ನ್ಯಾಪ್ ಮಾಡಿಸಿದ್ದ ಆದರೆ ಪ್ರವಲ್ಲಿಕಾಳ ಪುಕ್ಕಲುತನದಿಂದಾಗಿ ಅವಳು ತಾನಾಗೇ ಮುಂದಾಗಿ ಸಾಕ್ಷಿ ಕೊಡುವ ಸಂಭವ ಕಡಿಮೆ ಎಂದು ಈಗ ತಿಳಿದಿತ್ತು ಆದರೆ ಭರತ ಖಾನನಿಗೂ ಪ್ರವಲ್ಲಿಕಾಳ ಸೌಂದರ್ಯ ಹುಚ್ಚು ಹಿಡಿಸಿತ್ತು ಜೊತೆಗೆ ತನ್ನ ಮೇಲೆ ಪೋಲೀಸ್ ಕಂಫ್ಲೇಂಟ್ ಕೊಟ್ಟವಳ ಮೇಲೆ ಸೇಡು ತೀರಿಕೊಳ್ಳಬೇಕೆಂಬ ಬಯಕೆ ಪ್ರವಲ್ಲಿಕಾಳನ್ನು ಕಳೆದು ಕೊಳ್ಳಲು ಭರತ ಖಾನ ತಯಾರಿಲ್ಲ . ಪ್ರವಲ್ಲಿಕಾಳ ಬ್ರೈನ್ ವಾಷ್ ಮಾಡಿ ಅವಳನ್ನು ತಮ್ಮ ಗುಂಪಿನಲ್ಲಿ ಶಾಮೀಲು ಮಾಡಿಕೊಂಡು ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಾಸ್ಟೆಲ್ನಲ್ಲಿ ಸ್ಥಾಪಿಸಿಬಿಟ್ಟರೆ ಯಾರಿಗೂ ಅನುಮಾನ ಬರದಂತೆ ಅವಳು ತನ್ನ ಹಾಸ್ಟೆಲ್ನಿಂದಲೇ ಭರತಖಾನನಿಗಾಗಿ ಮತ್ತು ಅವನ ಗುಂಪಿಗಾಗಿ ಆಪರೇಟ್ ಮಾಡಬಹುದೆಂದು ಅವನ ಧೀರ್ಘಾವಧಿ ಯೋಜನೆ ಹಾಗಾಗಿ ಕೆಡಿ ಶಿವಣ್ಣ ಹಾಸ್ಟೆಲ್ ಅನ್ನು ಎತ್ತಂಗಡಿ ಮಾಡಲು ನೋಟೀಸ್ ಹಾಕಿಸಿದ್ದಾನೆ ಅಂತ ಹುಸೇನಿ ಹೇಳಿದಾಗ ಅವನಿಗೆ ಭಯಂಕರ ಸಿಟ್ಟು ರೇಗಿತು ಕೆ.ಡಿ ಶಿವಣ್ಣನಿಗೆ. ಪೋನ್ ಮಾಡಿ ಹಾಸ್ಟೆಲ್ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲವೆಂದು ಎಚ್ಚರಿಸಿದ ಇವನ್ಯಾರೋ ಲೋಕಲ್ ಗೂಂಡಾ… ನಾನಾದ್ರೋ ರಾಜ್ಯದ ಮಂತ್ರಿ ಎಂದು ಅಸಡ್ಡೆಯಿಂದ `ಏನ್ ಮಾಡ್ಕೋತೀಯೋ ಹೋಗ್..’ಎಂದು ಪೋನ್ ಕುಕ್ಕಿ ಬಿಟ್ಟ . ಶಿವಣ್ಣ ಇದರಿಂದ ರೋಷಗೊಂಡ ಭರತಖಾನ್ `ನಿಂಗೆ ಮಾಡ್ತೀನಿ ತಡಿ ಎಂದು ಈ ಬಾಂಬ್ ಸ್ಪೋಟದ ಮೂಲಕ ಕೆ.ಡಿ ಶಿವಣ್ಣನಿಗೆ ಎಚ್ಚರಿಕೆ ಕೊಟ್ಟಿದ್ದ.

***

ಭಾಗ - 6

Posted on September 24th, 2007 in ಹೊಸಕಥೆ, ಕಟ್ಟು ಕಥೆ by sritri

ಶಾರದಮ್ಮನರಿಗೆ ಧಾರಿಣಿ ಗಂಡನನ್ನು ಅಮೆರಿಕದಲ್ಲಿಯೇ ಬಿಟ್ಟು ಬೆಂಗಳೂರಿಗೆ ಹಿಂತಿರುಗಿದ್ದು ಹಿಡಿಸಲಿಲ್ಲ. ಧಾರಿಣಿ ಏನೇ ಕಾರಣ ಹೇಳಿದರೂ ಅವರಿಗೆ ಅದು ಒಪ್ಪಿಗೆಯಾಗಲಿಲ್ಲ. ಮಗನಂತೂ ತಮ್ಮ ಕೈಬಿಟ್ಟುಹೋಗಿದ್ದಾಯಿತು, ಹೆಣ್ಣು ಮಕ್ಕಳಾದರೂ ಸಂಸಾರ ಮಾಡಿಕೊಂಡು ನೆಮ್ಮದಿಯಾಗಿರಲಿ ಎಂದು ಅವರ ಆಸೆಯಾಗಿತ್ತು. ಆದರೆ ಧಾರಿಣಿ ಯಾರ ಮಾತನ್ನು ಕೇಳುವವಳಲ್ಲವೆಂದು ಅವರಿಗೆ ತಿಳಿದಿತ್ತು. ಶಾಸ್ತ್ರಿಗಳು ಮಗನ ಸಾವಿನ ಸುದ್ದಿ ಕೇಳಿದಾಗಿನಿಂದ ಕುಸಿದುಹೋಗಿದ್ದವರು ಚೇತರಿಸಿಕೊಂಡಿರಲೇ ಇಲ್ಲ. ಮನಸ್ಸಿನ ಸಮತೋಲನವೇ ತಪ್ಪಿಹೋದಂತೆ ಆಡುತ್ತಿದ್ದ ಶಾಸ್ತ್ರಿಗಳನ್ನು ಸುಧಾರಿಸುವುದು ಶಾರದಮ್ಮನಿಗೆ ಬಹಳ ಕಷ್ಟವಾಗಿತ್ತು. ಒಟ್ಟಿನಲ್ಲಿ, ಸುಖವಾಗಿದ್ದ ಅವರ ಸಂಸಾರದ ದೋಣಿ ಸುಳಿಗೆ ಸಿಕ್ಕಿಕೊಂಡಿತ್ತು.

ಅಮೇರಿಕದ ದೈತ್ಯ ಕಂಪನಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಧಾರಿಣಿ, ಬೆಂಗಳೂರಿನಲ್ಲಿ ಪ್ರವಲ್ಲಿಕಾಳ ಹಾಸ್ಟೆಲ್ಲಿನಲ್ಲಿ ಇರಲು ಬಯಸಿ ಬಂದಿದ್ದಾಳೆ. ಆದರೆ ತಾನೀಗ ಇಬ್ಬರು ವೈರಿಗಳನ್ನು ಎದುರಿಸುತ್ತಿದ್ದೇನೆಂದು ಅವಳಿಗೆ ತಿಳಿದಿಲ್ಲ. ಅಮೇರಿಕದ ದೈತ್ಯ ಕಂಪನಿ ಇವಳನ್ನು ಹುಡುಕುತ್ತಿರುವ ಮೊದಲನೆಯ ವೈರಿ. ಪ್ರವಲ್ಲಿಕಾಳನ್ನು ಹುಡುಕುತ್ತಿರುವ ಭರತಖಾನ, ಪ್ರವಲ್ಲಿಕಾಳ ಹೋಲಿಕೆಯಿರುವ ಇವಳ ಎರಡನೆಯ ವೈರಿ!

***
ನಗರಾಭಿವೃದ್ದಿ ಮಂತ್ರಿ ಕೆ.ಡಿ .ಶಿವಣ್ಣ ನ ಏರ್ ಕಂಡೀಶನ್ಡ್ ಛೇಂಬರ್ ನಲ್ಲಿ ಉದ್ದೋ ಉದ್ದನೆಯ ಟೇಬಲ್ ಮೇಲೆ ಬೆಂಗಳೂರಿನ ಮ್ಯಾಪ್ ಹರಡಿಕೊಂಡು ಕೂತಿದೆ ರಾಜಯ್ಯನ ಗುಂಪು.ಇಲ್ನೋಡು ಸಿವೂ…ಅಂತ ರಾಜಯ್ಯ ಉತ್ಸಾಹದಿಂದ ಬೆಂಗಳೂರಿನ ಮುಖ್ಯನಾಡಿಯಂತಿರುವ ಕೆ.ಜಿ ರೋಡ್ ಯಾನೇ ಕೆಂಪೇಗೌಡ ರೋಡ್ ನ ಮೇಲೆ ದಪ್ಪನೆ ಚಿನ್ನದ ಉಂಗುರ ತೊಟ್ಟ ತನ್ನ ಕಪ್ಪನೆ ಬೆರಳನ್ನಿಟ್ಟು
ತೋರಿಸುತಿದ್ದಾನೆ…ರಾಜಯ್ಯ ಹೊರಪ್ರಪಂಚಕ್ಕೆ ಸಮಾಜ ಸೇವಕ.ಆದರೆ ನಗರದ ಮುಖ್ಯರಸ್ತೆಯಲ್ಲಿರುವ ಆಯಕಟ್ಟಿನ ಜಾಗಗಳನ್ನು ತನ್ನೆಲ್ಲಾ ಶಕುನಿ ಬುದ್ದಿ ಉಪಯೋಗಿಸಿ ತನ್ನದಾಗಿ ಮಾಡಿಕೊಂಡು ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಕಟ್ಟಿ ಮಾರುವುದು, ಅವನ ನಿಜವಾದ ದಂಧೆ…ಕೆ.ಡಿ. ಶಿವಣ್ಣನನ್ನು ತೆರೆಮರೆಯಿಂದ ಮಂತ್ರಿ ಮಾಡಿದ್ದು ರಾಜಯ್ಯನೇ ಆದ್ದರಿಂದ ಸಿವೂಗೆ ರಾಜಯ್ಯನಿಗೆ `ಎಲ್ಪು’ ಮಾಡದೆ ಬೇರೆ ವಿಧಿಯೇ ಇಲ್ಲ….ಸದ್ಯಕ್ಕೆ ರಾಜಯ್ಯನ ಕಾಕದೃಷ್ಟಿ ಬಿದ್ದಿರುವುದು ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಜಾಗವೊಂದರ ಮೇಲೆ…ರಾಜಯ್ಯ ಮುಂದುವರೆಸಿದ`ನೋಡ್ ಸಿವೂ…ಇದು ಕೆ.ಜಿ. ರೋಡು ಇಂಗ್ ಹೋಯ್ತದೆ…ಇದು ಮೈಸೂರ್ ಬ್ಯಾಂಕ್ …ಇಲ್ಲಿಂದ ಅವಿನ್ಯೂ ರೋಡು ಸುರು ಆಯ್ತದಲ್ಲಪ್ಪಾ…ಅಂಗೆ ಇಲ್ಲಿಂದ ಪ್ಯಾಲೇಸ್ ರೋಡು ಸುರು ಆಯ್ತದೆ…ಈ ಎರಡನೇ ಪ್ಲ್ಯಾಟೇ ನಂಗೆ ಬೇಕಾಗಿರೋದು …ಕೊಡಿಸೋದು ನಿನ್ನ ಜವಾಬುದಾರಿ….’
`ಆದ್ರೇ ಅಲ್ಲೇನೋ ಬಿಲ್ಡಿಂಗು ಇರಬೇಕಲ್ಲ ರಾಜಯ್ಯಾ…’ಶಿವು ಕೇಳಿದ `ಅದ್ಯಾವುದೋ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ್ದು ಕಣಣ್ಣಾ…’ ಅಂದ ರಾಜಯ್ಯನ ಭಂಟ. ಓಹೋ… ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಆ ಸರಳಾದೇವಿ ಬಾಯ್ ಬಡ್ಕೋತಾಳೆ…’ಅಂದ ಚಿಂತೆಯಿಂದ ಶಿವಣ್ಣ `ಅದೆಲ್ಲಾ ನಂಗೊತ್ತಿಲ್ಲಾ ಸಿವೂ…ನಿನ್ನ ಮಂತ್ರಿ ಮಾಡಿದ್ದು ಯಾಕೆ ಮತ್ತೆ…ಎರಡೆಕರೆಗೆ ಸಲ್ಪ ಕಡಿಮೆ ಇದೆ ಆ ಜಾಗ. ಅದ್ಯಾವುದೋ ಹಳೇ ಬಿಲ್ಡಿಂಗು ಐತೆ ಅದ್ನ ಒಡ್ದು ಕಾಂಪ್ಲೆಕ್ಸ್ ಕಟ್ಟಿದರೆ ಆಹಾ. ಒಂದೊಂದು ಅಂಗ್ಡಿಗೆ ಎಷ್ಟೆಷ್ಟು ಎಣಿಸಬಹುದು ಯೋಚ್ ನೆ ಮಾಡು ನಿಂಗೂ ಪರ್ಸೆಂಟೇಜ್ ಕೊಡಣಂತೆ. ಆವಮ್ಮನ ಬಾಯ್ ಹೆಂಗಾದ್ರೂ ಮುಚ್ಚಿಸಿದರಾಯ್ತು. ಎಕರೆಗೆ ನೂರು ರುಪಾಯಿ ತರ ನಾಮಿನಲ್ ಅಮೌಂಟ್ ಫಿಕ್ಸ್ ಮಾಡು…ಸಾಕು…ಇನ್ನು ಹದಿನೈದು ದಿನದಲ್ಲಿ ಜಾಗ ನನ್ನ ಹೆಂಡ್ತಿ ಹೆಸರಲ್ಲಿ ಆಗಿರಬೇಕು ನೋಡು…’ಎಂದು ಹೇಳುತ್ತಾ ಎದ್ದು ಹೊರಡಲು ಅನುವಾದ ರಾಜಯ್ಯ ಅವನ ಭಂಟರ ಗುಂಪು ಹಿಂಬಾಲಿಸಿತು ಕೆ.ಡಿ

ಶಿವಣ್ಣ ಈ ಕಾರ್ಯ ಹೇಗೆ ಸಾಧಿಸುವುದೆಂದು ಯೋಚಿಸಲಾರಂಭಿಸಿದ. ಅಂದ ಹಾಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ ಆ ಜಾಗದಲ್ಲಿರುವುದು ಲೇಡೀಸ್ ಹಾಸ್ಟೆಲ್ ಮತ್ತು ಪ್ರವಲ್ಲಿಕಾ ಆ ಹಾಸ್ಟೆಲ್ ನಲ್ಲೇ ಇರುವುದು.

ಬಂಧನದಿಂದ ಬಿಡುಗಡೆಗೆ - 5

Posted on September 16th, 2007 in ಹೊಸಕಥೆ, ಕಟ್ಟು ಕಥೆ by sritri

ಪ್ರವಲ್ಲಿಕಾ ತನ್ನ ಸಾಹಸವನ್ನು ಗೆಳತಿಯ ಮುಂದೆ ಬಣ್ಣಿಸುತ್ತಿದ್ದಳು .ತನಗೆ ಊಟ ಕೊಡಲು ಬಂದವನ ತಲೆಗೆ ಬಲವಾದ ಪೆಟ್ಟು ಕೊಟ್ಟು ಭಂದನದಿಂದ ತಪ್ಪಿಸಿಕೊಂಡು ಹೊರಗೋಡಿ ಬಂದಿದ್ದಳು ಪ್ರವಲ್ಲಿಕಾ.ಅವಳಿಗಿರುವ ಧೈರ್ಯಕ್ಕೆ ಅವಳು ಅಷ್ಟು ಮಾಡಿದ್ದೇ ಹೆಚ್ಚ್ಯು!ಅದು ಬೆಂಗಳೂರು ಹೊರವಲಯದಲ್ಲಿರುವ ಯಾವುದೋ ಪ್ರದೇಶ ಅದು.ಸಾಕಷ್ಟು ದೂರ ಓಡೋಡಿ ಬಂದ ಮೇಲೆ ಬಸ್ ಸ್ಟಾಪ್ ಒಂದು ಕಂಡಾಗ ಸ್ವಲ್ಪನಿರಾಳವೆನಿಸಿತ್ತು ಅವಳಿಗೆ…ರೆಡ್ ಬೋರ್ಡ್ ಬಸ್ ಬಂದಾಗ ಹತ್ತಿದ ಜನರಲ್ಲಿ ಒಂದಾಗಿ ಬಸ್ಸೊಳಗೆ ನುಸುಳಿದ್ದಳು. ಟಿಕೆಟ್ಟಿಗೆ ಕೈಯಲ್ಲಿ ಕಾಸಿಲ್ಲ(ಅಮ್ಮ ಬ್ಲೌಸಿನಲ್ಲಿ ಯಾಕೆ ದುಡ್ಡಿಟ್ಟುಕೊಳ್ಳುತ್ತಾರೆ ಅಂತ ಅವಳಿಗೆ ಆಗ ಹೊಳೆಯಿತು) ಕಂಡೆಕ್ಟರ್ ಕೇಳಿದಾಗ ಸರಾಗವಾಗಿ ಹಿಂದೆ ತೊಗೋತಾರೆ ಅಂತ ಉತ್ತರಿಸಿದವಳಿಗೆ ತನ್ನ ಮೇಲೆ ತನಗೇ ಬೆರಗು…!

ಪ್ರವಲ್ಲಿಕಾ ಹೀಗೆ ತಾನು ಓಡಿ ಬಂದ ಕತೆಯನ್ನು ಸಾದ್ಯಂತವಾಗಿ ಹೇಳಿ ಮುಗಿಸಿದಾಗ ಕಾಂತಿಯ ಬಿಟ್ಟ ಬಾಯಿ ಬಿಟ್ಟಂತೆಯೇ ಇತ್ತು…ಅವಳು ತಂದ ಊಟ ತಟ್ಟೆಗಳಲ್ಲೇ ತಣ್ಣಗಾಗಿತ್ತು…

***

ಧಾರಿಣಿ ಪ್ರವಲ್ಲಿಕ ಅಕ್ಕ ತಂಗಿಯರಾದರೂ ಬಹಳಷ್ಟು ಸಾಮ್ಯವಿದೆ ಚೆನ್ನಾಗಿ ಪರಿಚಯವಿಲ್ಲದವರು ಇವರಿಬ್ಬರ ಶಾಲಾದಿನಗಳಲ್ಲೂ ಕಾಲೇಜು ದಿನಗಳಲ್ಲೂ ಅವಳನ್ನು ಇವಳು ಇವಳನ್ನು ಅವಳು ಅಂದುಕೊಂಡು ಬೇಸ್ತು ಬೀಳುವುದಿತ್ತು ಪ್ರವಲ್ಲಿಕ ಧಾರಿಣಿಗಿಂತಲೂ ಸ್ವಲ್ಪ ಕುಳ್ಳಿ.ಧಾರಿಣಿ ಪ್ರವಲ್ಲಿಕಾಳಷ್ಟು ಬಿಳುಪಿಲ್ಲ.ಅಷ್ಟೇ ಅವರಿಬ್ಬರಲ್ಲಿ ಎದ್ದು ತೋರುವ ವ್ಯತ್ಯಾಸ.ಆದರೆ ಸ್ವಭಾವದಲ್ಲಿ ಅಜಗಜಾಂತರವಿದೆ.ಧಾರಿಣಿ ಬುದ್ದಿವಂತೆ,ಚಾಲೂಕು ಧೈರ್ಯಸ್ತೆ.ಪ್ರವಲ್ಲಿಕ ಪುಕ್ಕಲಿ ಜಿರಳೆ ಕಂಡರೂ ಗಡಗಡ ನಡುಗಿ ಬಿಡುತ್ತಾಳೆ. ಧಾರಿಣಿಯದೂ ಅವಳಣ್ಣ ಪ್ರತಾಪನಂತೆ ಅಸಾಧಾರಣ ಬುದ್ದಿಮತ್ತೆ.ಭಾರತದಲ್ಲಿದ್ದಾಗ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು ಮದುವೆಯಾಗಿ ನ್ಯೂಯಾರ್ಕ್ ಗೆ ಬಂದ ಮೇಲೆ H-4 ವೀಸಾ ಸ್ಟೇಟಸ್ ನಿಂದಾಗಿ ಕೆಲವು ದಿನ ಮನೆಯಲ್ಲಿ ಕೂರಬೇಕಾಯ್ತು. ನಂತರ ತನ್ನ ಬುದ್ದಿಬಲದಿಂದ ಒಂದು ಸ್ಟಾರ್ಟ್ ಅಪ್ ಕಂಪನಿಯೊಂದರಲ್ಲಿ ಕೆಲಸ ಸಂಪಾದಿಸಿದಳು ಈಗ ರಾಜೀವವನಿಗಿಂಥಾ ಮೊದಲೇ ಅವಳ ಗ್ರೀನ್ ಕಾರ್ಡ್ ಬಂದಿದೆ.ಅವಳ ಬುದ್ದಿವಂತಿಕೆಯೇ ಅವಳಿಗೆ ಆಪಾಯ ತರುವಂಥಾ ಪರಿಸ್ಥಿತಿ ತಂದಿದೆ ಈಗ. ಧಾರಿಣಿಯ ತಲೆಯಲ್ಲಿರುವ ಹೊಸ ಆವಿಷ್ಕಾರದ ಐಡಿಯಾಗೆ ಪೇಟೆಂಟ್ ಮಾಡಿಸಿಕೊಳ್ಳಲು ಅವಳ ಕಂಪನಿ ಸೂಚಿಸಿದೆ ಆದರೆ ಈ ಚಿಕ್ಕ ಕಂಪನಿ ಅಂಥಾ ಒಂದು ಪೇಟೇಂಟ್ ಪಡೆದು ಬಿಟ್ಟರೆ ಅದರ ಎದುರಾಳಿ ದೈತ್ಯ ಕಂಫನಿಗೆ ಆಗುವ ನಷ್ಟ ಅಗಾಧ ಈ ಎದುರಾಳಿ ದೈತ್ಯ ಕಂಫನಿ ಧಾರಿಣಿಯನ್ನು ಖರೀದಿಸಲು ಪ್ರಯತ್ನಿಸಿತು… ಧಾರಿಣಿ ಸೊಪ್ಪು ಹಾಕಲಿಲ್ಲಾ…ಸಾಮದಾನಗಳಾದ ನಂತರ ದಂಡವೆಂಬ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.

***
ಧಾರಿಣಿ ತನ್ನ ಸುರಕ್ಷತೆಗಾಗಿ ಸ್ವಲ್ಪ ದಿನ ಎಲ್ಲಾದರೂ ಹೋಗುವುದೇ ಲೇಸೆಂದು ಅವಳ ಕಂಪನಿಯ ಮುಖ್ಯಸ್ಥರು ಸೂಚಿಸಿದರು. ರಾಜೀವನೂ ಅನುಮೋದಿಸಿದ. ಧಾರಿಣಿ ನಾನು ಹೇಡಿಯಂತೆ ಯುದ್ಧರಂಗ ಬಿಟ್ಟು ಓಡಿ ಹೋಗುವುದಿಲ್ಲವೆಂದು ವಾದಿಸಿದಳು. ಅದು ಹೇಡಿತನ ಅಲ್ಲವೆಂದು ಹುಷಾರಿಯಿಂದು ಅವಳನ್ನು ಒಪ್ಪಿಸಿದ ರಾಜೀವ.ಅದರಂತೆ ಧಾರಿಣಿ ಭಾರತಕ್ಕೆ,ಬೆಂಗಳೂರಿಗೆ ಹೊರಟು ನಿಂತಿದ್ದಾಳೆ.ಅಲ್ಲಿ ಜಾವ ಪ್ರೋಗ್ರ್ಯಾಂ ಕಲಿಯುವವಳಂತೆ ನಟಿಸಿ ಪ್ರವಲ್ಲಿಕಾ ಹಾಸ್ಟೆಲ್ನಲ್ಲಿ `ಗೆಸ್ಟ್’ ಅಂತ ಇರುವುದೆಂದು ಅವಳ ಪ್ಲ್ಯಾನ್. ಹಳ್ಳಿಯಲ್ಲಿನ ಅಪ್ಪ ಅಮ್ಮನಿಗೂ ಸದ್ಯಕ್ಕೆ ಪ್ರವಲ್ಲಿಕಾಗೂ ಜಾವ ಕಲಿಯಲು ಬರುತ್ತಿದ್ದೇನೆ ಅಂತಲೇ ಹೇಳಿದ್ದಾಳೆ. ಕೇಶವನ ಮನೆಯಲ್ಲಿರಮ್ಮಾ ಅಂತ ಶಾಸ್ತ್ರಿಗಳು ಹೇಳಿದಾಗ ಇಲ್ಲಪ್ಪಾ ಅವರ ಮನೆಯಲ್ಲಿ ಮಡಿ ಜಾಸ್ತಿ ಅಲ್ಲದೇ ಅವರ ಮನೆ ಮತ್ತಿಘಟ್ಟದಲ್ಲಿರುವುದರಿಂದ ಓಡಾಟ ಕಷ್ಟ ಅಂತ ನಿರಾಕರಿಸಿ ಬಿಟ್ಟಿದ್ದಾಳೆ.ಜೊತೆಗೆ ಪ್ರವಲ್ಲಿಕಾ ಜೊತೆ ಇರಲು ಇನ್ಯಾವಾಗ ಸಮಯ ಸಿಗುತ್ತದೆ ಎಂದು ಹೇಳಿದ್ದಾಳೆ. ಅವಳಿಗೆ ತಿಳಿಯದ ವಿಷಯವೆಂದರೆ ಅವಳು ಭಾರತಕ್ಕೆ ಹೊರಡುವ ಈ ಸಂಗತಿ ಆ ಎದುರಾಳಿ ದೈತ್ಯಕಂಪನಿ ಈಗಾಗಲೇ ಗೊತ್ತಿದೆ ಮತ್ತು ಅವರುಗಳು ಅವಳನ್ನು ಬೆಂಗಳೂರಿಗೂ ಹಿಂಬಾಲಿಸುತ್ತಿದ್ದಾರೆ ಎಂಬುದು. ವಿಪರ್ಯಾಸವೆಂದರೆ ಅವಳ ಬಾಸ್ ಆದ ವ್ಯಕ್ತಿಯೇ ಆ ದೈತ್ಯನಿಂದ ಖರೀದಿಸಲ್ಪಟ್ಟು ಈ ವಿಷಯ ತಿಳಿಸಿರುವುದು!! ಅಮೆರಿಕಾದಂಥ ದೇಶದಲ್ಲಿ ಬೌದ್ದಿಕ ಹಕ್ಕುಗಳ ಮೇಲಿನ ಧಾಳಿಗಳನ್ನು ಬಹಳ ತೀವ್ರವಾಗಿ ಪರಿಗಣಿಸುತ್ತಾರೆ. ಆದರೆ ಭಾರತದಲ್ಲಿ ಹಾಗಿಲ್ಲ. ಧಾರಿಣಿಯನ್ನು ವಶಪಡಿಸಿಕೊಳ್ಳುವುದು ಸುಲಭ ಎಂದು ಅವಳ ಬಾಸ್ ಆದ ವ್ಯಕ್ತಿಯೇ ಆದೈತ್ಯ ಕಂಪನಿಗೆ ತಿಳಿಸಿದ್ದಾನೆ.

Next Page »