ಇಂತಿ ನಿನ್ನ ಪ್ರೀತಿಯ - ಮಧುವನ ಕರೆದರೆ

Posted on April 22nd, 2008 in ಹಾಡು ಹಬ್ಬ by sritri

ಚಿತ್ರ : ಇಂತಿ ನಿನ್ನ ಪ್ರೀತಿಯ (2008)
ಸಾಹಿತ್ಯ : ಜಯಂತ ಕಾಯ್ಕಿಣಿ
ಸಂಗೀತ : ಸಾಧು ಕೋಕಿಲ
ಗಾಯಕಿ : ವಾಣಿ

ಹಾಡು ಕೇಳಿ

ಮಧುವನ ಕರೆದರೆ
ತನುಮನ ಸೆಳೆದರೆ
ಶರಣಾಗು ನೀನು…. ಆದರೆ
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ
ಶರಣಾಗು …. ಆದರೆ
ಸೆರೆಯಾಗು …. ಆದರೆ

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು…. ಆದರೆ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೋ ಹೋಗಿದೆ ಮರೆತು
ನಾನ್ಯಾರು ಹೇಳು …. ಆದರೆ

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವ ರೇಖೆಗಳಲ್ಲಿ
ನಾ ಮೂಡಬೇಕು…. ಆದರೆ
ಎದುರಿದ್ದೂ ಕರೆಯುವೆ ಏಕೆ?
ಜೊತೆಯಿದ್ದೂ ಮರೆಯುವೆ ಏಕೆ?
ನಿನ್ನೊಲವು ನಿಜವೇ …. ಆದರೆ

ಮಧುವನ ಕರೆದರೆ
ತನುಮನ ಸೆಳೆದರೆ
ಶರಣಾಗು ನೀನು…. ಆದರೆ
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ
ಶರಣಾಗು ಆದರೆ…. ಸೆರೆಯಾಗು ಆದರೆ ….

_________________________________

ಬಾ ಮಳೆಯೇ ಬಾ - ಬಿ. ಆರ್. ಲಕ್ಷ್ಮಣರಾವ್

Posted on April 14th, 2008 in ಕವಿ-ಕಾವ್ಯ, ಹಾಡು ಹಬ್ಬ by sritri

ಕವಿ : ಬಿ. ಆರ್. ಲಕ್ಷ್ಮಣರಾವ್
ಚಿತ್ರ: ಆಕ್ಸಿಡೆಂಟ್
ಸಂಗೀತ : ರಿಕಿ ಕೆಜ್
ಗಾಯಕ : ಸೋನು ನಿಗಮ್

ಹಾಡು ಕೇಳಿ

ಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ

ಓಡು, ಕಾಲವೇ ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆಯೇ ನಿಲ್ಲು, ಕಾಲವೇ ನಿಲ್ಲು
ನಮ್ಮ ತೆಕ್ಕೆ ಸಡಿಲಾಗದಂತೆ

ಬೀಸು, ಗಾಳಿಯೇ, ಬೀಸು, ನನ್ನೆದೆಯ ಆಸೆಗಳ
ನಲ್ಲೆ ಹೃದಯಕೆ ತಲುಪಿಸು
ಹಾಸು, ಹೂಗಳ ಹಾಸು, ಅವಳು ಬಹೊ ದಾರಿಯಲ್ಲಿ
ಕಲ್ಲುಗಳು ತಾಗದಂತೆ

ಬೀರು, ದೀಪವೇ, ಬೀರು, ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲ್ಲಿ
ನಾಚಿ ನೀರಾಗದಂತೆ

ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲ
ಪ್ರೇಮಿಗಳ ಸೀಮೆಯಲ್ಲಿ
ನಾವೀಗ ಅನಿಮಿಷರು, ನಮ್ಮ ಈ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ.

ಹನಿಗವನ - ಡಾಲರ್ ಪವರ್!

Posted on April 7th, 2008 in ಕವನಗಳು by sritri

ಡಾಲರ್ ಪವರ್!

ಅಮೆರಿಕದಲ್ಲಿ ಇರುವವರೆಲ್ಲಾ
ಬಹಳ ಶ್ರೀಮಂತರೆಂದುಕೊಂಡು
ತೋರಿಕೆಯ ಮರ್ಯಾದೆ ನೀಡುತ್ತಿದ್ದ
ಒಳಗೇ ಉರಿದುಕೊಳ್ಳುತ್ತಾ
ಬಾಯುಪಚಾರ ಮಾಡುತ್ತಿದ್ದ,
ಭಾರತದ ನೆಂಟರೊಬ್ಬರು
ಡಾಲರ್ ಬೆಲೆ ಜರ್ರೆಂದು
ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ
ಕೇಳಿದರಂತೆ ಕಿಟ್ಟಿಯನ್ನ-

ಪಾಪ! ಅಮೆರಿಕದಲ್ಲಿದೀರಂತೆ,
ಹೊಟ್ಟೆ-ಬಟ್ಟೆಗೇನೂ ಅಲ್ಲಿ
ತಾಪತ್ರಯವಿಲ್ಲ ತಾನೇ?

(’ಸಂಗಮ’ದಲ್ಲಿ ಪ್ರಕಟವಾಗಿರುವ ಹನಿಗವನ)
ಚಿತ್ರ : ಅರುಣ್ ಮೂರ್ತಿ

Next Page »