ಪೋಲಿ ಹುಡುಗ - ಹಂಸಲೇಖ

Posted on June 23rd, 2008 in ಹಂಸ್, ಹಾಡು ಹಬ್ಬ by sritri

 ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು!

ಚಿತ್ರ - ಪೋಲಿ ಹುಡುಗ (೧೯೮೯)
ಸಾಹಿತ್ಯ ಮತ್ತು ಸಂಗೀತ -
ಗಾಯಕರು - ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು
ಹಂಸಲೇಖ
ಚಿತ್ರಕೃಪೆ : ಮೀರಾ ಕೃಷ್ಣ

ಜನನ ಮರಣಗಳೆರಡು ಕುರುಡು
ಮುಂದೆ ಹೋಗದು
ಹಿಂದೆ ಬಾರದು
ನಿಂತಲ್ಲಿ ನಿಲ್ಲದು
ಸ್ನೇಹ ಪ್ರೀತಿಗಳೆರಡು ಕುರುಡು
ದೂರ ಹೋಗದು
ಬೇರೆಯಾಗದು
ಕಣ್ಣಿಗೆ ಕಾಣದು

ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!

ಕುಣಿಯುವ ಸಡಗರ ನಮಗೆ ಇದೆ
ಕುಣಿಸುವ ಡಮರುಗ ಯಾರಲಿದೆ?
ಯಾರಲಿದೆ? ಹೆಣ್ಣಲಿದೆ
ನಲಿಸುವ ರಾಗ
ಒಲಿಸುವ ವೇಗ
ಆ ಹೆಣ್ಣಿನಲ್ಲಿದೆ
ಆ ಕಣ್ಣಿನಲ್ಲಿದೆ
ಆ ನೋಟದಲ್ಲಿದೆ
ಮೈಮಾಟದಲ್ಲಿದೆ||೧||

ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!

ಹೂವಿಗೆ ಪ್ರತಿದಿನ ಜನುಮದಿನ
ಹಾರುವ ದುಂಬಿಗೆ ಏನು ದಿನ?
ಏನು ದಿನ? ಮದುವೆ ದಿನ
ಅರಳುವ ಗುಟ್ಟು ಬಯಲಿಗೆ ಬಿಟ್ಟು
ಬಾರೆ ನಾಳೆ ಎನ್ನದೆ
ಬಾರೆ ವೇಳೆ ಮಾಡದೆ
ಬೇರೆ ರಾಗ ಹಾಡದೆ
ಬಾರೆ ತಾಳ ತಪ್ಪದೆ ||೨||

ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!

***

ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ

Posted on June 13th, 2008 in ಕುವೆಂಪು, ಕವಿ-ಕಾವ್ಯ by sritri

ಕವಿ: ಕುವೆಂಪು
ಚಿತ್ರ :ಕಾನೂರು ಹೆಗ್ಗಡತಿ
ಗಾಯಕ : ಪುತ್ತೂರು ನರಸಿಂಹ ನಾಯಕ್

ಹಾಡು ಕೇಳಿ

ಹೋಗುವೆನು ನಾ…….
ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು
ಹೋಗುವೆ ಮಲೆಯ, ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ |

ಅಲ್ಲಿ ಕಾನನ ಮಧ್ಯೆ ತುಂಗೆಯು
ಮುತ್ತನಿಡುವಳು ಕಣ್ಣಿಗೆ
ದಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಚಾಮರ ತಣ್ಣಗೆ
ಬೀಸು ಗಾಳಿಗೆ ವಲೆಯೆ ಭದ್ರೆಯು
ತುಂಬಿ ಹರಿವಳು ನುಣ್ಣಗೆ
ಮಲೆಯ ಬಿತ್ತರದೆದುರು
ಹೊನಲುಗಳೆನಿತು ನೋಡದೋ ಸಣ್ಣಗೆ |

ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ
ಪೈರು ಪಚ್ಚೆಯ ಬೆಳೆವುದೋ
ಎಲ್ಲಿ ಗದ್ದೆಯ ಕೋಗು
ಪವನನ ಹಸಿಗೆ ತೆರೆತೆರೆಯೊಲೆವುದೋ
ಬಿಂಕಗಂಗಳ ಮಲೆಯ ಹೆಣ್ಗಳ
ಭಿತ್ತಿ ಎಲ್ಲೆಡೆ ಸೆಳೆವುದೋ
ಎಲ್ಲಿ ಕಾಲವು ತೇಲಿ ಸುಖದಲಿ
ತಿಳಿಯದಂತೆಯೆ ಕಳೆವುದೋ |

ಹಾತೊರೆಯುತಿದೆ ಕಾತರಿಸುತಿದೆ
ಮನಕೆ ಮನೆ ಗಿರ ಹಿಡಿದಿದೆ
ನೆನಪಿನಳರಿನ ಬಂಧನಾತ್ಮದ
ಭೃಂಗ ಹೊಡೆನಲಿಕುಡಿದಿದೆ
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಬಿಳಿಯ ತಿಂಗಳ ಸಿರಿವನಂಗಳ
ಮಲೆಯ ಮಂಗಳ ನಾಡಿಗೆ |

ಜಡೆ - ಜಿ. ಎಸ್. ಶಿವರುದ್ರಪ್ಪ

Posted on June 10th, 2008 in ಜಿ.ಎಸ್.ಎಸ್., ಕವಿ-ಕಾವ್ಯ by sritri

ಕವನ - ಜಡೆ
ಕವಿ - ಜಿ. ಎಸ್. ಶಿವರುದ್ರಪ್ಪ

ಲಲನೆಯರ ಬೆನ್ನೆನೆಡೆ
ಹಾವಿನೊಲು ಜೋಲ್ವ ಜಡೆ
ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು
ಅತ್ತಿತ್ತ ಹರಿದ ಜಡೆ!
ಚೇಳ್ ಕೊಂಡಿಯಂಥ ಜಡೆ,
ಮೋಟು ಜಡೆ, ಚೋಟು ಜಡೆ,
ಚಿಕ್ಕವರ ಚಿನ್ನ ಜಡೆ !
ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ
ಗಂಟು ಜಡೆ!
ಅಕ್ಕ ತಂಗಿಯ ಮುಡಿಯ
ಹಿಡಿದು ನಾನೆಳೆದಂಥ
ಮಲ್ಲಿಗೆಯ ಕೆಂಪು ಜಡೆ
ಕೇದಗೆಯ ಹೆಣೆದ ಜಡೆ
ಮಾತೃ ಮಮತಾವೃಕ್ಷ ಬಿಟ್ಟ ಬೀಳಲಿನಂತೆ
ಹರಡಿರುವ ತಾಯ ಜಡೆ !
“ಕುರುಕುಲ ಜೀವಾಕರ್ಷಣ ಪರಿಣತ” - ಆ
ಪಾಂಚಾಲಿಯ ಜಡೆ!
ಸೀತೆಯ ಕಣ್ಣೀರೊಳು ಮಿಂದ ಜಡೆ
ಓ ಓ ಈ ಜಡೆಗೆಲ್ಲಿ ಕಡೆ !

***

ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಾಳ ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ್ತ ಬರುವಂಥ
ಬೆಳ್ಳಕ್ಕಿಗಳ ಜಡೆ
ಕೊಂಚೆಗಳ ಜಡೆ
ಮರ ಮರದಿ ಬಳಕುತಿಹ ಹೂಬಿಟ್ಟ ಬಳ್ಳಿ ಜಡೆ !
ಕಾಡ ಬಯಲಿನ ಹಸುರು ಹಸರದಲಿ ಹರಿ ಹರಿದು
ಮುನ್ನಡೆವ ಹೊಳೆಯ ಜಡೆ !
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ !
ಗಿರಿ ಶಿವನ ಶಿರದಿಂದ ಹಬ್ಬಿ ಹಸರಿಸಿ ನಿಂದ
ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ !
ಚಂದ್ರಚೂಡನ
ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ ಕಾವ್ಯಗಳ ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ !
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ !

Next Page »