ತಕ್ಕಡಿಯಿಂದ ತಂಬೂರಿಯ ತನಕ

Posted on February 28th, 2009 in ಜಿ.ಎಸ್.ಎಸ್., ಕವಿ-ಕಾವ್ಯ by sritri

ಕವಿ : ಜಿ.ಎಸ್.ಶಿವರುದ್ರಪ್ಪ
ಸಂಕಲನ : ನೂರು ಕವಿತೆಗಳು

ತಕ್ಕಡಿಯಿಂದ ತಂಬೂರಿಯ ತನಕ
ಸಹಧರ್ಮಿಣಿಯ ಮೂಗುತಿಯ ಮಿನುಗು,
ತಂಬೂರಿಯಿಂದ ತುಂಬುವತನಕ
ಹಾಡಿನ ಮೊಳಗು.

ತಕ್ಕಡಿಯಲ್ಲಿ ತೂಗಿದನು
ಇಹದ ಸರುಕೆಲ್ಲವನು
ಈ ವ್ಯಾಪಾರಿ.
ಗೊತ್ತಾಗಲಿಲ್ಲ ವೈಕುಂಠಕೆ ದಾರಿ.
‘ದಾರಿ ಯಾವುದಯ್ಯಾ ವೈಕುಂಠಕೆ?’
ಪ್ರಶ್ನೆಗುತ್ತರವಾಗಿ ಮೊಳಗಿತ್ತು ಒಳಗಿಂದಲೇ
ಮರುಪ್ರಶ್ನೆ ; ‘ಯಾರು ಹಿತವರು ನಿನಗೆ
ಈ ಮೂವರೊಳಗೆ
ನಾರಿಯೋ? ಧಾರಿಣಿಯೋ? ಬಲುಧನದ ಸಿರಿಯೋ?’

ಉತ್ತರದ ಬೆಳಕನ್ನು ಕಂಡ ; ಹೆಗಲಿಗೇರಿತ್ತು ತಂಬೂರಿ
ಉದ್ದಕ್ಕೂ ತೆರೆದ ಹಾಡಿನ ದಾರಿ
ಪಲ್ಲವಿ ಅನುಪಲ್ಲವಿಗಳಲಿ ಚಲಿಸಿತು ಚರಣ,
ಕನ್ನಡದ ಜನಮನದ ಹೊಸ್ತಿಲಿನಲಿ
ರಾಗದ ಕಿರಣ
ಊರೂರು ಕೇರಿಕೇರಿಗಳಲ್ಲಿ
ದೇವರನಾಮದನುರಣನ.
ಅಂದಿನಿಂದ ಇಂದಿನತನಕ ಕೇಳುತಿದೆ ಅದೇ
ತಂಬೂರಿಯೋಂಕಾರ
ವಿಟ್ಠಲನ ಚರಣದ ಸುತ್ತ ಝೇಂಗುಡುವ
ಭ್ರಮರ
ಕೃಷ್ಣಮಹಿಮೆಯ ಕಥೆಗೆ ಬರೆದ ನಾದದ ಭಾಷ್ಯ
ಈ ಪುರಂದರ.

ಎಹೆಸಾನ್ ತೇರಾ ಹೋಗಾ ಮುಝ್ ಪರ್…..

Posted on February 26th, 2009 in ಪದ-ಸಂಪದ, ಅನಿಸಿದ್ದು by sritri

“ಮೈ ಇನ್ ಪರ್ ಕೊಯಿ ಎಹಸಾನ್ ನಹಿ ಕರನಾ, ಬಲ್ ಕೀ ಯೆ ಮುಜ್ ಪರ್ ಎಹಸಾನ್ ಕರ ರಹೆ ಹೈ” - ಝೀ ಟಿವಿಯ ಯಾವುದೋ ಸಿನಿಮಾವೊಂದರ ನಡುವೆ ಮೂಡಿ ಬಂದ ಈ ಸಂಭಾಷಣೆ ನನ್ನ ಮನಸ್ಸನ್ನು ಸೆಳೆಯಿತು. ಈ ಅರ್ಥ ಬರುವ ಸಂಭಾಷಣೆ ಬಹಳಷ್ಟು ಸಲ ಕೇಳಿದ್ದರೂ, ಈ ಬಾರಿ ಮಾತ್ರ ನನಗೆ ಹೊಸ ಅರ್ಥವೊಂದು ಹೊಳೆಯಿತು.

“ಹೇಸಾನ” - ಈ ಪದದ ಬಗ್ಗೆ ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತೋ ಗೊತ್ತಿಲ್ಲ. ನಮ್ಮ ಬಳಗದಲ್ಲಿ ಈ ಪದ ಆಗಾಗ ಚಲಾವಣೆಯಾಗುತ್ತಿರುತ್ತದೆ. “ಇಷ್ಟು ದಿನ ಸುಮ್ಮನಿದ್ದು ಈಗೇನೊ ದೊಡ್ಡದಾಗಿ ಹೇಸಾನ ಹೊರಿಸುವವರ ಹಾಗೆ ಬಂದರು”, “ನಿನ್ನದೇನು ಮಹಾ ಹೇಸಾನ?” - ಈ ರೀತಿಯಾಗಿ ಈ ಪದ ಪ್ರಯೋಗ. ಒಟ್ಟಿನಲ್ಲಿ ಇಂಗ್ಲೀಷಿನ favour, ಕನ್ನಡದ ಉಪಕಾರ, ದಾಕ್ಷಿಣ್ಯ …ಅನ್ನುವ ಅರ್ಥದಲ್ಲಿಯೇ ಈ ಪದದ ಬಳಕೆ ಇದೆ. ನನ್ನ ಗಮನಕ್ಕೆ ಬಂದಾಗೆಲ್ಲ, ಈ ಪದ ದೂರು, ಅಸಮಾಧಾನ, ಆಕ್ಷೇಪವನ್ನು ವ್ಯಕ್ತಪಡಿಸುವ ರೂಪದಲ್ಲಿಯೇ ಈ ಉಪಯೋಗವಾಗಿರುವುದು ಹೆಚ್ಚು. ಒಳ್ಳೆಯ ಅರ್ಥದಲ್ಲಿ , `ಕೃತಜ್ಞತೆ’ ಸೂಚಕವಾಗಿ ಬಳಸುವುದು ಕಡಿಮೆ. ಅದೇಕೋ ಈ ಪದದ ಮೇಲೆ ನನಗೆ ಎಳ್ಳಷ್ಟೂ ಅಕ್ಕರೆಯಿಲ್ಲ. ಮಾತಿನಲ್ಲಿನಾಗಲೀ, ಬರಹದಲ್ಲಾಗಲೀ ಈ ಪದವನ್ನು ಎಂದೂ ಬಳಸಿಕೊಂಡಿಲ್ಲ. ಮಲತಾಯಿ ಧೋರಣೆ ಅನುಸರಿಸಿ ನಾನು ದೂರವಿಟ್ಟಿರುವ ಕೆಲವಾರು ಪದಗಳಲ್ಲಿ ಇದೂ ಒಂದು. ಆದರೂ, ಪಾವೆಂ ಅವರ ಪದಾರ್ಥ ಚಿಂತಾಮಣಿ ಅಥವಾ ಪದ ಮೂಲ ಚರ್ಚಿಸುವ ಇತರ ಪುಸ್ತಕಗಳಲ್ಲಿ ಈ ಪದದ ಹುಟ್ಟಿನ ಬಗ್ಗೆ ಏನಾದರೂ ಇದೆಯೇ ಎಂದು ತಿಳಿಯುವ ಕುತೂಹಲ ಇದ್ದೇ ಇದೆ.

“ಎಹಸಾನ್” ಪದ ಕೇಳಿದಾಗ, ‘ಹೇಸಾನ’ ಪದಕ್ಕೆ ಇದೇ ಮೂಲವಿದ್ದೀತೇ ಎನ್ನಿಸಿತು. ಕನ್ನಡವೊಂದನ್ನು ಬಿಟ್ಟು ಬೇರಾವ ಭಾಷೆಯನ್ನೂ ನುಡಿಯಲರಿಯದ ಬಾಯಿಗಳ ಹಲ್ಲು, ನಾಲಿಗೆಗಳಡಿಯಲ್ಲಿ ಸಿಕ್ಕಿ ಹಾಕಿಕೊಂಡು, ಬಹುಶಃ ಉರ್ದು ಮೂಲದ್ದಿರಬಹುದಾದ ಎಹಸಾನ್ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡು ‘ಹೇಸಾನ’ ಆಗಿದ್ದಿರಬಹುದೇ?

ಅಬ್ಬಾ! ಯಾವ ಮಣ್ಣಿನಲ್ಲಿಯೋ ಹುಟ್ಟಿ ಬೆಳೆದ ಪದವನ್ನು ಇನ್ನೆಲ್ಲಿಗೋ ಹೊತ್ತು ತಂದು, ಅದನ್ನು ತನ್ನದೇ ಅನ್ನಿಸಿಬಿಡುವ ಭಾಷಾ ಪ್ರವಾಹವೇ!

ರಾಮಲಿಂಗ ಎನ್ನಂತರಂಗ

Posted on February 23rd, 2009 in ಹಯವದನ, ವಿಜಯರಾಯ, ದಾಸ ದರ್ಶನ by sritri

ರಚನೆ - ವಿಜಯದಾಸರು

ವಿದ್ಯಾಭೂಷಣ

ಲಿಂಗ ರಾಮಲಿಂಗ ಎನ್ನಂತರಂಗ
ಮಂಗಳಾಂಗನೆ ಸರ್ವೋತ್ತುಂಗನೇ ||ಪಲ್ಲವಿ||

ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ
ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ

ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ
ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ||೧||

ಘನ ವಿದ್ಯಾತುರಗೆ ಮಂತ್ರ ಕಲಾಪವೇ
ಧನಪತಿಯ ಸಖಗೆ ಕೈಕಾಣಿಕೆಯೇ ?

ಮನೆ ರಜತ ಪರ್ವತಗೆ ಫಣಿಯ ಆಭರಣವೇ
ಮನೋ ನಿಯಾಮಕಗೆ ಎನ್ನ ಬಿನ್ನಹವೇ ? ||೨||

ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೇ
ಗೌರಿಯ ರಮಣಗೆ ಈ ಸ್ತ್ರೋತ್ರವೇ

ವೀರ ರಾಘವ ವಿಜಯ ವಿಠಲನ ನಿಜ ಹಸ್ತ
ವಾರಿಜ ದಳದಿಂದ ಉದ್ಭವಿಸಿದ ||೩||

Next Page »