ವಿರೋಧವಿಲ್ಲ ವಿರೋಧಿಗೆ

Posted on March 26th, 2009 in ಕವನಗಳು by sritri

ಹಬ್ಬ ಬಂದರೂ ಹೊಸದೇನಿಲ್ಲ;
ಬಕೇಟಿನಲ್ಲಿ ಕದರಬೇಕಿಲ್ಲ ಸಗಣಿ ನೀರು
ಬೀದಿಯ ಧೂಳಡಗುವಂತೆ ಚಿಲ್ಲನೆ
ನೀರೆರಚಿ ಹೆಣೆಯಬೇಕಿಲ್ಲ
ಚುಕ್ಕಿ ಚೆಲ್ಲಿ ರಂಗೋಲಿ ಚಪ್ಪರವ
ಹೊಸ್ತಿಲಿನ ನೆತ್ತಿಗೆ
ಕೆಮ್ಮಣ್ಣಿನ ಬದಲು ಕೆಂಪು ಪೇಂಟಿದೆ
ತೋರಣಕ್ಕೆ ಮಾವಿಲ್ಲ, ಬೇವೂ ಬೇಕಿಲ್ಲ
ಎಣ್ಣೆಯ ಜಿಗುಟು ತೊಳೆಯಲು
ಸೀಗೆಯ ಘಾಟು ಸಹಿಸಬೇಕಿಲ್ಲ
ಶವರಿನ ಅಡಿ ಮೈತೆರೆದು ನಿಂತರೆ
ನಿತ್ಯ ಅಭ್ಯಂಜನವೇ, ಬೇಕಿಲ್ಲ
ಅದಕೊಂದು ಸಂಭ್ರಮದ ನೆವನ.

ಇಷ್ಟೇ ಮಿಣ್ಣಗೆ ಉರಿಯುವ
ಪುಟ್ಟ ಹಣತೆಗಳು ಸಾಕು
ಹೆಚ್ಚಾದರೆ ಕರಿ ಅಡರೀತು ಛಾವಣಿಗೆ
ಮನೆ ಕಪ್ಪಾದರೆ ಕೊಳ್ಳುವರಾರು?
ಮಾರಲು ಹಾಕಿದಾಗ, ಮೊದಲೇ ರಿಸೆಶನ್ನು!
ಮನೆ ತುಂಬಾ ಕಮಟು ತುಂಬುವ
ಅಗರುಬತ್ತಿಗೂ ನಿಷೇಧವಿದೆ
ಯಾವ ಶಾಸನವೂ ಎಚ್ಚರಿಕೆ ವಿಧಿಸದೆಯೆ.
ಘಂಟೆಗಳ ದನಿಯಿಲ್ಲ,
ಹೂವು, ಪತ್ರೆಗಳ ಹಂಗಿಲ್ಲ
ಪೂಜೆಯೂ ಕ್ಷಿಪ್ರ-ಸಂಕ್ಷಿಪ್ತ
ಹೇಳಿಲ್ಲವೇ ದಾಸರು?
“ಸುಲಭಪೂಜೆಯ ಮಾಡಿ
ಬಲವಿಲ್ಲದವರು!”

ಹಬ್ಬದೂಟಗಳಲ್ಲಿ
ಸಿಹಿ ಯಾಕೆ ಕಡ್ಡಾಯ?
ತುಪ್ಪ, ಸಕ್ಕರೆ ಬೆರೆತು
ಹೆವ್ವಿಯಾಗಿರುವ ರಿಚ್ಚು ತಿನಿಸುಗಳನ್ನು
ಚಪ್ಪರಿಸುವುದೆಂತು ನಿಶ್ಚಿಂತೆಯಲಿ
ಮರೆತು ಕ್ಯಾಲರಿಗಳ?
ಒಬ್ಬಟ್ಟಿಗೆ ಜೊತೆಯೆನಿಸುವ
ಖಾರದಂಬೊಡೆ, ಬೋಂಡಗಳ
ಮಾಡಲು ಉಪಾಯವೇನಾದರೂ ಇದೆಯೆ
ಒಂದಿಷ್ಟೂ ಎಣ್ಣೆ ಬಳಸದಯೆ?

ಮಂಕು ಸುರಿಯುವ ಯುಗಾದಿಗೆ
ಇಷ್ಟಾದರೂ ಕಳೆ ಕಟ್ಟಿಸೋಣವೆಂದು
ಏಕೈಕ ಕನ್ನಡ ಉದಯ ಟಿವಿಗೆ ಮೊರೆ
ಹರಟೆ; ಚಟಪಟ ಮಾತಿನ ಪಟಾಕಿ
ಅದದೇ ಮುಖಗಳ ಅದೇ ಹಳೆ ಮುಖಾಬಿಲೆ
ತಾರೆಯರೊಡನೆ ಸಂದರ್ಶನ; ಅವರಿಗೆ ಹಬ್ಬವಿಲ್ಲವೇ?
ಅದೆಷ್ಟನೆಯ ಬಾರಿಯೋ ಮರುಪ್ರಸಾರವಾಗುತ್ತಿರುವ
ಅದೇ ಮಚ್ಚುಕೊಚ್ಚಿನ ಸೂಪರ್‌ಹಿಟ್ ಸಿನಿಮ!

ವಾರ್ತೆಯಲ್ಲೂ ಏನಿಲ್ಲ ಹೊಸದು ಅಂಥಾದ್ದು
ಎನ್‌ಡಿ‌ಎ, ಯುಪಿ‌ಎ, ಎಡ, ಬಲ, ತೃತೀಯರಂಗ
ಹೆಸರಷ್ಟೇ ಬೇರೆ, ತಿರುಳೊಂದೇ; ಮತದಾರನೇ ಮಂಗ
ಲೋಕಾಯುಕ್ತರ ರೈಡು, ನಾಯಕರ ದೆಹಲಿ ದೌಡು
ಕಣ್ಣೊರೆಸುವ ತನಿಖೆ, ಸಮಾವೇಶ ರದ್ದು
ಅದೂ ಈಗಾಗಲೇ ಇಂಟರ್ನೆಟ್ಟಿನಲ್ಲಿ ಓದಿ ಹಳಸಿದ್ದು!

ಯಾಕಲ್ಲೇ ನಿಂತುಬಿಟ್ಟೆ? ಬಾ ವಿರೋಧಿ ಬಲಗಾಲನ್ನಿಟ್ಟು
ಮುಖವೇಕೆ ಸಪ್ಪಗಿದೆ? ಕೇಳಿಸಿಬಿಟ್ಟಿತೇ ನನ್ನ ಗೊಣಗಾಟ!
ಇರಲಿಬಿಡು, ನಿನ್ನಲ್ಲಿ ಏಕೆ ಮುಚ್ಚುಮರೆ?
ಬೇವು-ಬೆಲ್ಲ, ಸಿಹಿ-ಕಹಿ ಸಾಕಾಗಿದೆ ಕಣೊ ಕ್ಲೀಷೆ
ಈ ಬಾರಿ ಹೇಗಿತ್ತು ಸ್ವಾಗತದ ಹೊಸ ವರಸೆ?

ನಂಬಿಬಿಟ್ಟೆಯಾ ದಡ್ಡ, ಏಪ್ರಿಲ್ ಮುಂದುಂಟು
ಇದುವರೆಗೆ ಬಿಚ್ಚಿದ್ದೆಲ್ಲಾ ಬರೀ ಸುಳ್ಳುಗಳ ಗಂಟು
ಹಬ್ಬವೆಂದರೆ ಅದಕೆ ಶುದ್ಧ ಸಂತಸದ ನಂಟು
ದಿನದ ಬವಣೆಗಳೆಲ್ಲಾ ಇಲ್ಲವೇ ಇಲ್ಲೆನಿಸಿ
ಮೈಮರೆಸಿ ನಗಿಸುವುದೇ ಎಲ್ಲ ಹಬ್ಬಗಳ ಗುಟ್ಟು
ವಿರೋಧ ನಿನಗಿಲ್ಲ ವಿರೋಧಿ, ಬಾರಯ್ಯಾ
ಕಡು ವಿರೋಧಿಗೂ ನಮ್ಮೆದೆಯಲ್ಲಿ ಜಾಗವುಂಟು!

“ಎಲ್ಲರಿಗೂ `ವಿರೋಧಿ’ ಸಂವತ್ಸರದ ಹಾರ್ದಿಕ ಶುಭಾಶಯಗಳು!”

ಹೇಮಂತ

Posted on March 10th, 2009 in ಕವಿ-ಕಾವ್ಯ by sritri

ಕವಿ - ಎಸ್.ವಿ. ಪರಮೇಶ್ವರ ಭಟ್ಟ

ಹೇಮಂತ ಋತುರಾಜನಿಳೆಗೆ ಬಂದಿಳಿವಂದು
ಹೂವಿಲ್ಲ ಹಸಿರಿಲ್ಲ ಚಿಗುರೆಲೆಗಳಿಲ್ಲ.
ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ
ಕುಸುಮಗಂಧ ತರುವ ಮರುತನಿಲ್ಲ.

ಚೆಂಗುಡಿಯ ಸಿಂಗರದ ವರವರೂಥಗಳೆನಿಸಿ
ಮೆರೆವ ಮರಗಿಡಬಳ್ಳಿ ಬರಿದೆ ಮೊಗವಿಳುಹಿ
ಮೌನದಲಿ ಮನದೆಗೆದು ಮನಮುರಿದು ನಿಂದಿಹವು
ಭಾಗ್ಯಹೀನರವೋಲು ದೀನರೆಂದೆನಿಸಿ.

ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ
ಸುಯ್ಯೆಲರ ಸೂಸುತಿವೆ ನಿನ್ನ ಹಳಿದು
ಮೆಲ್ಲಮೆಲ್ಲನೆ ಸರಿದು ಮೊಗದ ಜವನಿಕೆಯೆಳೆದು
ತುಂಗೆ ತೊರೆ ಹರಿಯುತಿದೆ ನಡುಗಿ ಮೈನೆನೆದು.

ಹಣ್ಣೆಲೆಗಳುದುರುತಿಹ ಬರಲು ಮರಗಳನೇರಿ
ಕಣ್ಣೀರು ಸುರಿಸುತಿದೆ ಕಾನನದ ಹಕ್ಕಿ.
ತಣ್ಣನೆಯ ಗಾಳಿಯಲಿ ಹಿಮದೊಂದು ಸೋನೆಯಲಿ
ಮಿಣ್ಣನಿದೆ ಮಾನವನ ಜೀವ ಸೆರೆ ಸಿಕ್ಕಿ.

ಎತ್ತಲುಂ ಬಿಳಿಮಂಜು ಎತ್ತಲುಂ ಹಿಮಗಾಳಿ
ಎತ್ತಲುಂ ನಡುಗುತಿಹ ನೀರವಾಲೋಕ!
ಎತ್ತಲುಂ ಬರಡು ಬನವೆತ್ತಲುಂ ಜಡದ ಜನ
ಎತ್ತಲುಂ ಶೂನ್ಯಮನ ಮರುಗುತಿಹ ಮರುಕ.

ಹೇಮಂತನಾಳಿಕೆಯ ಕಠಿನ ಶಾಸನವಿಂತು
ಅದಕೆ ತಲೆವಾಗುವುದೆ ಸೃಷ್ಟಿಯೊಳಮರ್ಮ.
ಒಂದೊಂದು ಋತುವಿನಲಿ ಒಂದೊಂದು ರೀತಿಯಲಿ
ಸಂಸ್ಕಾರ ಪಡೆಯುವುದೆ ಜೀವಗಳ ಧರ್ಮ.

* * *

ಹ್ಯಾಂಗೆ ಮಾಡಲಯ್ಯಾ ಕೃಷ್ಣ, ಪೋಗುತಿದೆ ಆಯುಷ್ಯ

Posted on March 9th, 2009 in ದಾಸ ದರ್ಶನ by sritri

ರಚನೆ : ಗೋಪಾಲದಾಸರು

ವಿದ್ಯಾಭೂಷಣ

ಪುತ್ತೂರು ನರಸಿಂಹ ನಾಯಕ್

ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ
ಮಂಗಳಾಂಗ ಭವಭಂಗ ಬಿಡಿಸಿ ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ||

ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ
ಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿ
ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ಲೇಶ ಸಾಧನವ ಕಾಣದೆ ದುಸ್ಸಹವಾಸದಿಂದಲೇ ದಿನದಿನ ಕಳೆದೆ ||೧||

ಶಶಿಮುಖಿ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ
ನಿಶಿಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ
ಉಸುರಿದ ನೆಲವು ಸರ್ವಕಾಲ ನಿನ್ನೊಡೆತನ ಎಂಬುವ ಬಗೆಯನು ಅರಿಯದೆ ||೨||

ನೆರೆನಂಬಿದ ಪಾವಟೆಗಳು ಎಲ್ಲಾ ಸರಿದು ಪೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯಂತೂ ಇಲ್ಲ
ಪರಿಪರಿ ವಿಷಯದ ಆಸೆಯು ಎನಗೆ ಪಿರಿದು ಆಯಿತಲ್ಲ
ಹರಿಯೇ, ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ ! ||೩||

ಅವನಿಯೊಳಗೆ ಪುಣ್ಯಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿಂದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲ ! ||೪||

ಭಾಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳಿದ ಹರಿಕಥೆ ಸಂಯೋಗವೆಂಬೋದಿಲ್ಲ
ನೀಗುವಂಥ ಭವಭಯವ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಠಲ ತಲೆಬಾಗಿ ನಿನ್ನನೇ ಬೇಡಿಕೊಂಬೆ ||೫||

Next Page »