ಇಷ್ಟು ದಿನ ಈ ವೈಕುಂಠ
ರಚನೆ : ಕನಕದಾಸರು
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪಲ್ಲವಿ||
ಎಂಟು ಏಳನು ಕಳೆದುದರಿಂದೆ
ಭಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ
ಭಂಟನಾಗಿ ಬಂದೆನೋ ರಂಗಶಾಯಿ ||೧||
ವರ್ಜ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||೨||
ರಂಭೆ ಊರ್ವಶಿ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ, ರುದ್ರರ ಕಂಡೆ
ಶಂಬರಾರಿ ಪಿತನೆ ರಂಗಶಾಯಿ ||೩||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿ ಕೇಶವನ ನಾ ಕಂಡೆ ||೪||