ತಿಲ್ಲಾಣ - ಅಂಬಿಕಾತನಯದತ್ತ
೧
ಇದಾವ ಹಾಡು ?
ಇದಾವ ತಾಲ ?
ಇದಾವ ರಾಗ ?
ನನ್ನ ಪುಟ್ಟ ಪುರಂದರ ವಿಠಲಾ !
೨
ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ;
ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ ;
ಇದಾವ ರಸ ?
ಇದಾವ ಭಾವ ?
ಇದಾವ ಹಾವ ?
ನನ್ನ ಪುಟ್ಟ ಪುರಂದರ ವಿಠಲಾ !
೩
ಮಾತಿನ ಸೂತಕವಿಲ್ಲದ ನಾದದ ನಾದುವ ಸೊಲ್ಲು,
ಅರ್ಥದ ಪಾತಕವಿಲ್ಲದ ಜೀವದ ಭಾವದ ಸೊಲ್ಲು,
ಇದಾವ ರೀತಿ ?
ಇದಾವ ಗಮಕ ?
ಇದಾವ ಯಮಕ ?
ನನ್ನ ಪುಟ್ಟ ಪುರಂದರ ವಿಠಲಾ !
೪
ತಿಲ್ಲಾಣದಲ್ಲಿ ಪಲ್ಲವಿಸಿ, ಮುಂದೆ ಪಾಡಿಗೆ ಬರುವ ನಿನ್ನೀ ಪಾಡು
ವಾಚಾಮಗೋಚರವೇ – ಈ ನಿನ್ನ ಧ್ವನಿ ಕಾವ್ಯ. . . . . . . . . .
ಹಿಂದಿನ ನೆನಸೋ ?
ಇಂದಿನ ಮನಸೋ ?
ಮುಂದಿನ ಕನಸೋ ?
ನನ್ನ ಪುಟ್ಟ ಪುರಂದರ ವಿಠಲಾ !
(’ಉಯ್ಯಾಲೆ’ ಸಂಕಲನದ ಈ ಕವಿತೆಯನ್ನು ನನಗೆ ಕೊಟ್ಟಿದ್ದು ಸುನಾಥ ಕಾಕಾ. ಎಚ್. ಕೆ. ನಾರಾಯಣ ಅವರು ಹಾಡಿರುವ ಈ ಹಾಡು ಎಲ್ಲಾದರೂ ಸಿಗಬಹುದೇ?)
6 Comments